Advertisement

ನೀರಿಗೆ ಆಗ್ರಹಿಸಿ ಹಿನಕಲ್‌ ಗ್ರಾಮಸ್ಥರ ಪ್ರತಿಭಟನೆ

09:40 PM May 03, 2019 | Team Udayavani |

ಮೈಸೂರು: ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಎಸ್‌ಯುಸಿಐ ಜಿಲ್ಲಾ ಸಮಿತಿಯು ಹಿನಕಲ್‌ ಗ್ರಾಮಸ್ಥರೊಂದಿಗೆ ಸೇರಿ ಪ್ರತಿಭಟನೆ ನಡೆಸಿತು.

Advertisement

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಹಿನಕಲ್‌ ಗ್ರಾಮದ ಮಹಿಳೆಯರು ಹಾಗೂ ಸಮಿತಿಯ ಸದಸ್ಯರು ಖಾಲಿ ಕೊಡ ಪ್ರದರ್ಶಿಸಿ ನೀರಿನ ಸಮಸ್ಯೆ ಇಲ್ಲವೆಂಬ ಅಧಿಕಾರಿಗಳ ಹೇಳಿಕೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅಂತರ್ಜಲ ಕುಸಿತ: ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯೆ ಎಂ.ಉಮಾದೇವಿ ಮಾತನಾಡಿ, ಸುಮಾರು 35 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಹಿನಕಲ್‌ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆ ಇಲ್ಲ. ಪಂಚಾಯತ್‌ ವ್ಯಾಪ್ತಿಯಲ್ಲಿರುವ 28 ಕೊಳವೆ ಬಾವಿಗಳ ಪೈಕಿ 25 ಕೊಳವೆ ಬಾವಿಗಳು ಅಂತರ್ಜಲ ಕುಸಿತದಿಂದಾಗಿ ಬತ್ತಿಹೋಗಿವೆ.

ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಕಾವೇರಿ, ಕಬಿನಿ ಸೇರಿ ವಿವಿಧ ಬಹುಹಂತಗಳ ಕುಡಿಯುವ ನೀರು ಸರಬರಾಜಿನ ಸೌಲಭ್ಯ ನಗರಕ್ಕೆ ಲಭ್ಯವಿದ್ದರೂ ನಗರದ ಕೆಲವು ಬಡಾವಣೆಗಳಿಗೆ ಬವಣೆ ಉಂಟಾಗಿದೆ ಎಂದರು.

ಗ್ರಾಮದಲ್ಲಿ ಪೈಪ್‌ಲೈನ್‌: ನೀರು ಒದಗಿಸುವ ಪೈಪ್‌ಲೈನ್‌ ಹಿನಕಲ್‌ ಮೂಲಕವೇ ಹಾದು ಹೋಗಿದ್ದರೂ ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ. ವಿಶ್ವಸಂಸ್ಥೆಯ ಶಿಫಾರಸಿನ ಅನ್ವಯ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿನಿತ್ಯದ ಬಳಕೆಗೆ 85 ಲೀಟರ್‌ನಂತೆ 35,000 ಜನರಿಗೆ ಸರಿ ಸುಮಾರು 30 ಲಕ್ಷ ಲೀಟರ್‌ ನೀರಿನ ಅವಶ್ಯಕತೆಯಿದೆ. ಅಷ್ಟು ನೀರನ್ನು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ವಿಫ‌ಲವಾಗಿದೆ ಎಂದು ದೂರಿದರು.

Advertisement

ನಿತ್ಯ ಜಗಳ: ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಅಥವಾ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ, ನಗರಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ತಲೆಕೆಡಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ನೀರಿಗಾಗಿ ಗ್ರಾಮದಲ್ಲಿ ಇಂದಿಗೂ ಪರಿತಪಿಸುವಂತಹ ಸ್ಥಿತಿ ಇದೆ. ನೀರಿಗಾಗಿ ಜಗಳ, ಗಲಾಟೆ ಸಹ ನಡೆಯುತ್ತಿದೆ. ಇಂತಹ ಸ್ಥಿತಿ ಇದ್ದರೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಿಡಿಕಾರಿದರು.

ಬಹುಗ್ರಾಮ ಯೋಜನೆ: ಕೂಡಲೇ ಹಿನಕಲ್‌ ಗ್ರಾಮಕ್ಕೆ ನಿತ್ಯ ವಾಣಿವಿಲಾಸ ನೀರು ಸರಬರಾಜು ಮಂಡಳಿಯಿಂದ ಹೆಚ್ಚುವರಿ ನೀರು ಪೂರೈಸಬೇಕು. ಗ್ರಾಮದ ಅವಶ್ಯಕತೆಗೆ ತಕ್ಕಂತೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತ್ವರಿತಗತಿಯಲ್ಲಿ ಸ್ಥಾಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ನದಿ ಮೂಲದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ ಗ್ರಾಮವನ್ನು ತರಬೇಕೆಂದು ಒತ್ತಾಯಿಸಿದರು.

ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ಪಂಚಾಯಿತಿಗೆ ತೆರಳಿ ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್‌ಯುಸಿಐನ ವಿ.ಯಶೋಧರ, ಕಾರ್ಯಕರ್ತರಾದ ಹರೀಶ್‌, ಟಿ.ಆರ್‌.ಸುನೀಲ್‌, ಸುಮ, ಆಕಾಶಕುಮಾರ್‌, ಕಲಾವತಿ, ಅಭಿಲಾಷ್‌, ಅನಿಲ್‌, ಪುಟ್ಟರಾಜು, ಮುದ್ದುಕೃಷ್ಣ, ಹಿನಕಲ್‌ ಗ್ರಾಮಸ್ಥರಾದ ಚಂದ್ರು, ಚಂದ್ರನಾಯಕ್‌, ರತ್ನಮ್ಮ, ವನಜಾ, ಗೌರಮ್ಮ, ಮಂಗಳಮ್ಮ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next