ದಾವಣಗೆರೆ: ವಕೀಲರ ಕೆಲಸ, ಹಿತಾಸಕ್ತಿಗೆ ಧಕ್ಕೆ ತರುವಂತಹ ವಕೀಲರ ತಿದ್ದುಪಡಿ ಕಾನೂನು ಜಾರಿ ವಿರೋಧಿಸಿ ಶುಕ್ರವಾರ ವಕೀಲರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ವಕೀಲರ ತಿದ್ದುಪಡಿ ಕಾನೂನು ಅಧಿನಿಯಮದ ಪ್ರತಿ ಸುಡುವ ಮೂಲಕ ತಿದ್ಧುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಯಾವುದೇ ಕಾರಣಕ್ಕೂ ಈಗಿರುವ ವ್ಯವಸ್ಥೆಗೆ ತಿದ್ದುಪಡಿ ಮಾಡಬಾರದು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ನೂತನ ತಿದ್ದುಪಡಿ ಜಾರಿಗೆ ಬಂದಲ್ಲಿ ವಕೀಲರು ಮುಕ್ತವಾಗಿ ಕೆಲಸ ಮಾಡುವ ವಾತಾವರಣವೇ ಇಲ್ಲದಂತಾಗುತ್ತದೆ. ಉದ್ದೇಶಿತ ತಿದ್ದುಪಡಿಯಂತೆ ಶಿಸ್ತು ಸಮಿತಿಯಲ್ಲಿ ವೈದ್ಯರು, ಇಂಜಿನಿಯರ್, ಲೆಕ್ಕ ಪರಿಶೋಧಕರು ಇತರರು ಇರುತ್ತಾರೆ.
ಒಂದೊಮ್ಮೆ ತಪ್ಪು ಮಾಡುವಂತಹ ವಕೀಲರು ಆ ಸಮಿತಿ ಮುಂದೆ ವಿಚಾರಣೆಗೆ ಒಳಗಾಗಬೇಕಾಗುತ್ತದೆ. ಕಾನೂನು ಮಾಹಿತಿಯೇ ಇಲ್ಲದವರ ಮುಂದೆ ಕಾನೂನು ಬಲ್ಲಂತಹವರು ವಿಚಾರಣೆಗೆ ಹಾಜರಾಗುವುದು ಎಷ್ಟು ಸರಿ ಎಂದು ಪ್ರತಿಭಟನಾ ವಕೀಲರು ಪ್ರಶ್ನಿಸಿದರು.
ಕಕ್ಷಿದಾರರು ತಮ್ಮ ಪ್ರಕರಣದ ಬಗ್ಗೆ ವಕೀಲರಿಗೆ ಸರಿಯಾದ ಮಾಹಿತಿ ನೀಡದೇ ಇರುವುದು, ವಿಚಾರಣೆಗೆ ಸರಿಯಾಗಿ ಹಾಜರಾಗದೇ ಇರುವುದು ಮತ್ತಿತರ ಕಾರಣದಿಂದ ಕೇಸ್ ವಿಫಲಗೊಂಡಲ್ಲಿ ಅದರ ಹೊಣೆಯನ್ನು ಸಂಬಂಧಿತ ವಕೀಲರು ಹೊರ ಬೇಕಾಗುತ್ತದೆ.
ಉದ್ದೇಶಿತ ತಿದ್ದುಪಡಿಯಿಂದ ವಕೀಲರು ಕೆಲಸ ಮಾಡದಂತಹ ವಾತಾವರಣ ನಿರ್ಮಾಣವಾಗಲಿದೆ ಎಂದು ದೂರಿದರು. ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ, ಉಪಾಧ್ಯಕ್ಷ ಎಚ್.ಎಸ್. ಯೋಗೇಶ್, ಕಾರ್ಯದರ್ಶಿ ಎಲ್. ಶ್ಯಾಂ, ಎಸ್. ಮಂಜು, ಜೆ.ಎಸ್. ಭಾಗ್ಯಮ್ಮ, ಎಸ್. ಪರಮೇಶ್ ಇತರರು ಇದ್ದರು.