ಕಲಬುರಗಿ: ವಿಟಿಯು ತಾಂತ್ರಿಕ ವಿವಿಯಿಂದ ಫಲಿತಾಂಶ ವಿಳಂಬ, ಪರೀಕ್ಷೆಯಲ್ಲಿನ ಲೋಪದೋಷ ಸರಿಪಡಿಸುವುದು ಸೇರಿದಂತೆ ಪೂರಕ ಪರೀಕ್ಷೆ ಹಮ್ಮಿಕೊಳ್ಳಬೇಕೆಂದು ಆಗ್ರಹಿಸಿ ರಾಜ್ಯವ್ಯಾಪಿ ಕರೆಯ ಹಿನ್ನೆಲೆಯಲ್ಲಿ ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಸರ್ದಾರ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಬೆಳಗಾವಿ ತಾಂತ್ರಿಕ ವಿವಿ ಕುಲಪತಿಗೆ ಮನವಿ ಸಲ್ಲಿಸಿ 2016 ರ ಫಲಿತಾಂಶ ಐದು ತಿಂಗಳ ಕಾಲ ವಿಳಂಬವಾಗಿ ಪ್ರಕಟವಾಗಿದೆ. ಕೆಲ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಪರೀಕ್ಷೆಗೆ ತೆರಳುವ ಕೆಲ ಗಂಟೆಗಳ ಮುನ್ನ ಮರು ಮೌಲ್ಯಮಾಪನ ಫಲಿತಾಂಶ ಹಾಗೂ ತಡೆಹಿಡಿಯಲಾಗಿದ್ದ ಫಲಿತಾಂಶ ಪ್ರಕಟವಾಗಿದೆ. ಹೀಗೆ ಫಲಿತಾಂಶದಲ್ಲಿನ ಅನಿಶ್ಚತತೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆಯಲ್ಲಿನ ಗೊಂದಲಗಳಿಂದ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ಇದೇ ವೇಳೆ ಕ್ರಾಸ್ ಸೆಮಿಸ್ಟ್‌ರ್‌ನ ವಿದ್ಯಾರ್ಥಿಗಳು ಕೇವಲ ಎರಡು ತಿಂಗಳ ಅವಧಿಯಲ್ಲಿ 16ರಿಂದ 20 ವಿಷಯಗಳ ಪರೀಕ್ಷೆಯನ್ನು ಕೆಲ ಸಂದರ್ಭಗಳಲ್ಲಿ ದಿನಕ್ಕೆರಡು ಪರೀಕ್ಷೆ ಬರೆಯುವಂತೆ ಆಗಿದೆ. ಇದರಿಂದ ಒಂದು ವರ್ಷ ಕಳೆದುಕೊಳ್ಳುವ ಭೀತಿಯನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಪೂರಕ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು. ತಾಂತ್ರಿಕ ವಿವಿಯಲ್ಲಿಯೇ ದೋಷವಿದ್ದರೂ ಅದರ ಹೊಣೆಯನ್ನು ವಿದ್ಯಾರ್ಥಿಗಳ ಮೇಲೆ ಹೊರಿಸಲಾಗಿದೆ.2010ರ ಸ್ಕೀಮ್ (ನಾನ್-ಸಿಬಿಸಿಎಸ್) ವಿದ್ಯಾರ್ಥಿಗಳಿಗೆ ಕ್ರಿಟಿಕಲ್ ಇಯರ್ ಹಾಗೂ ಇಯರ್ ಬ್ಯಾಕ್ ವ್ಯವಸ್ಥೆ ತೆಗೆದುಹಾಕಬೇಕು ಎಂದು ಒತ್ತಾಯಿಸಿದ ಅವರು, ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆ ನೀಡಲು ಆಗ್ರಹಿಸಿದರು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಹಣಮಂತ ಎಸ್.ಎಚ್., ಅಭಯಾ ದಿವಾಕರ, ಶಿವರಾಜ ಪೋದ್ದಾರ, ದಿಗಂಬರ,ಶಿವಕುಮಾರ ಸೊನ್ನ, ಸ್ನೇಹಾ ಕಟ್ಟಿಮನಿ, ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಕಾಲೇಜು, ನೂತನ ವಿದ್ಯಾಲಯ ತಾಂತ್ರಿಕ ಕಾಲೇಜು, ಶರಣಬಸವೇಶ್ವರ ತಾಂತ್ರಿಕ ಕಾಲೇಜು ಹಾಗೂ ಇನ್ನಿತರ ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.