ಬೆಂಗಳೂರು: ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಉಲ್ಲೇಖೀಸಲಾಗಿದ್ದು ಈ ಮೂಲಕ ಸುಳ್ಳೊಂದನ್ನು ಮಕ್ಕಳ ತಲೆಗೆ ತುಂಬುವ ಷಡ್ಯಂತ್ರ ಮಾಡಲಾಗಿದೆ ಎಂದು ಸಂವಿಧಾನ ಸಂರಕ್ಷಣ ಐಕ್ಯತಾ ಸಮಿತಿ ಆರೋಪಿಸಿದೆ.
ಸಂವಿಧಾನ ಸಂರಕ್ಷಣ ಐಕ್ಯತಾ ಸಮಿತಿ ನೇತೃತ್ವದಲ್ಲಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಬೃಹತ್ ರ್ಯಾಲಿ ನಡೆಸಿ, ಸುತ್ತೋಲೆ ಹೊರಡಿಸಿದ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಯಿತು.
ಇತ್ತೀಚಿಗೆ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸಂವಿಧಾನ ದಿನ ಆಚರಿಸುವ ಸಂಬಂಧ ಸುತ್ತೋಲೆ ಹೊರಡಿಸಿದೆ. ಸಿಎಂಸಿಎ ಎಂಬ ಖಾಸಗಿ ಸಂಸ್ಥೆ ಕೈಪಿಡಿ ಸಿದ್ಧಪಡಿದ್ದು, ಈ ಕೈಪಿಡಿಯಲ್ಲಿರುವ ಅಂಶಗಳಂತೆಯೇ ಸಂವಿಧಾನ ದಿನ ಆಚರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಕೈಪಿಡಿಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ. ವಿವಿಧ ಸಮಿತಿ ಅಂಶ ಪಡೆದು ಕರಡು ಸಿದ್ಧಪಡಿಸಿದ್ದಾರೆ ಎಂದು ಉಲ್ಲೇಖೀಸಿದೆ.
ಇದು ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ಆರೋಪಿಸಿದರು. ದಲಿತ ಮುಖಂಡ ಮಹೇಶ್ ಮಾತನಾಡಿ, ಮಕ್ಕಳ ಮೂಲಕ ಸಂವಿಧಾನವನ್ನು ಅಂಬೇಡ್ಕರ್ ರಚಿಸಿಲ್ಲ ಎಂಬ ಹಸಿ ಸುಳ್ಳನ್ನು ಹರಿಬಿಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದು ಅತ್ಯಂತ ಕ್ರೂರ ಮನಸ್ಥಿತಿ. ಇದನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸುತ್ತೇವೆಂದರು.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಭಾರತದ ಅಖಂಡತೆಯನ್ನು ಗಟ್ಟಿಯಾಗಿ ಹಿಡಿದಿರುವ ಏಕೈಕ ಧರ್ಮಗ್ರಂಥ ಸಂವಿಧಾನ. ನಾವೆಲ್ಲರೂ ಅದರ ಅಡಿಯಾಳುಗಳು. ಆದರೆ, ಇಂದು ಕೆಲವರು ಅದನ್ನೇ ನಾಶಮಾಡಲು ಮುಂದಾಗಿದ್ದಾರೆಂದು ದೂರಿದರು. ಪ್ರತಿಭಟನೆಗೆ ಬೆಂಗಳೂರು ವಿವಿ ವಿದ್ಯಾರ್ಥಿಗಳು, ದಲಿತ ಸಂಘಟನೆಗಳು ಬೆಂಬಲ ಸೂಚಿಸಿದ್ದವು.
ಪ್ರತಿಭಟನಾ ರ್ಯಾಲಿಯಿಂದ ವಾಹನ ದಟ್ಟಣೆ: ಸಂವಿಧಾನ ಸಂರಕ್ಷಣ ಐಕ್ಯತಾ ಸಮಿತಿ ಹಾಗೂ ದಲಿತ ಸಂಘಟನೆಗಳು ಮಂಗಳವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ್ದು, ಇದರಿಂದ ಸುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು.
ಪ್ರತಿಭಟನಾಕಾರರು ಮಧ್ಯಾಹ್ನ 11.45ಕ್ಕೆ ಸಂಗೊಳ್ಳಿ ರೈಲು ನಿಲ್ದಾಣದಿಂದ ರ್ಯಾಲಿ ಆರಂಭಿಸಿದ್ದು, ಸ್ವಾತಂತ್ರ್ಯ ಉದ್ಯಾನವರೆಗಿನ ರಸ್ತೆಯು ವಾಹನ ದಟ್ಟಣೆಯಿಂದ ಕೂಡಿತ್ತು. ಮೌರ್ಯ ಸರ್ಕಲ್, ಆನಂದರಾವ್ ವೃತ್ತ, ಶಿವಾನಂದ ಸರ್ಕಲ್, ಓಕಳಿಪುರ ರಸ್ತೆ, ಮಹಾರಾಣಿ ಕಾಲೇಜು ರಸ್ತೆ ಸೇರಿ ಹಲವು ರಸ್ತೆಗಳಲ್ಲಿ ವಾಹನಗಳು ಸ್ತಬ್ಧವಾಗಿದ್ದವು. ಮಧ್ಯಾಹ್ನ 1ಗಂಟೆವರೆಗೂ ಸಂಚಾರ ಅಸ್ತವ್ಯಸ್ತವಾಯಿತು.