ಬೆಂಗಳೂರು: ಸುಪ್ರೀಂಕೋರ್ಟ್ ಆದೇಶವನ್ನು ಪರಿಶೀಲಿಸಿ, ಶಬರಿಮಲೆ ಪರಂಪರೆ ಉಳಿಸಬೇಕು ಎಂದು ಆಗ್ರಹಿಸಿ ಹಿಂದೂಪರ ಸಂಘಟನೆಗಳು ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದವು.
ಹಿಂದು ಮಹಾಸಭಾ, ಹಿಂದು ಜನಜಾಗೃತಿ ಸಮಿತಿ ಹಾಗೂ ಇತರೆ ಹಿಂದುಪರ ಸಂಘಟನೆಗಳು ಆಯೋಜಿಸಿದ್ದ ಪ್ರಾರ್ಥನಾ ಮೆರವಣಿಗೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿ ತೀರ್ಪಿನ ಪರಿಶೀಲನೆಗೆ ಒತ್ತಾಯಿಸಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಹಿಂದು ಜನಜಾಗೃತಿ ಸಮಿತಿ ಮೋಹನ ಗೌಡ ಮಾತನಾಡಿ, ಕೊಟ್ಯಾಂತರ ಹಿಂದುಗಳ ಶ್ರದ್ಧಾಕೇಂದ್ರವಾಗಿರುವ ಶಬರಿಮಲೆ ಪರಂಪರೆಗೆ ಸುಪ್ರೀಂಕೋರ್ಟ್ ತೀರ್ಪಿನಿಂದ ಹಾನಿಯಾಗಿದೆ. ಜತೆಗೆ ಸಾಕಷ್ಟು ಭಕ್ತರ ಧಾರ್ಮಿಕ ಭಾವನೆಗೆ ನೋವುಂಟುಗಿದೆ. ಶಬರಿಮಲೆಗೆ ಮಹಿಳಾ ಪ್ರವೇಶ ತೀರ್ಪು ನೀಡುವ ಮುನ್ನ ದೇವಸ್ಥಾನದ ಮುಖ್ಯಸ್ಥರು, ರಾಜಮನೆತನ ಮತ್ತು ಹಿಂದು ಧರ್ಮಚಾರ್ಯರ ಅಭಿಪ್ರಾಯ ಪಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದು ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಲೋಹಿತ್‌ಕುಮಾರ್ ಮಾತನಾಡಿ, ಧರ್ಮದ ಆಚರಣೆಯ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡುವುದು ಸರಿಯಲ್ಲ. ಧಾರ್ಮಿಕ ನಿರ್ಣಯ ವಿಚಾರವನ್ನು ಆಯಾ ಧರ್ಮ ಪಂಡಿತರಿಗೆ ಬಿಡಬೇಕು. ಇನ್ನು ಹಿಂದು ವಿರೋಧಿ ತೀರ್ಪು ನೀಡುತ್ತಿರುವ ಜಡ್ಜ್ಗಳ ವಿರುದ್ಧ ಮುಂದಿನ ದಿನಗಳಲ್ಲಿ ಹಿಂದುಗಳು ಹೋರಾಟ ಮಾಡಬೇಕಿದೆ ಎಂದರು.
ಈ ವೇಳೆ ಚರ್ಚ್‌ಗಳಲ್ಲಿ ನಡೆಯುವ ಲೈಂಗಿಕ ಶೋಷಣೆ ಮತ್ತು ಬಲಾತ್ಕಾರ ಪ್ರಕರಣಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಚರ್ಚ್‌ಗಳು ಮತ್ತು ಮಿಷನರಿ ಸಂಸ್ಥೆಗಳ ತಪಾಸಣೆ ನಡೆಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.