ಬೆಂಗಳೂರು: ಕಂಟೋನ್‌ಮೆಂಟ್ ರೈಲು ನಿಲ್ದಾಣದ ಬಳಿ ನಿರ್ಮಿಸಲು ಉದ್ದೇಶಿಸಿದ್ದ ಮೆಟ್ರೋ ನಿಲ್ದಾಣವನ್ನು ಮದಿನಾ-ಮೈದಾನಕ್ಕೆ ಸ್ಥಳಾಂತರಿಸಲು ನಿರ್ಧರಿಸಿರುವುದನ್ನು ಖಂಡಿಸಿ ಸುತ್ತಲಿನ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು. ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ವು ಮದಿನಾ-ಮೈದಾನದ ಕೆಳಗಡೆ ಮೆಟ್ರೋ ನಿಲ್ದಾಣ ನಿರ್ಮಿಸಲು ಮುಂದಾಗಿದೆ.
ಕಂಟೋನ್‌ಮೆಂಟ್ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಏಕೈಕ ಮೈದಾನ ಇದಾಗಿದೆ. ಮಕ್ಕಳು ಮಾತ್ರವಲ್ಲ; ಹಿರಿಯ ನಾಗರಿಕರಿಗೆ ಕೂಡ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಇದೇ ಮೈದಾನ ಅವಲಂಬಿಸಿದ್ದಾರೆ. ಮುಸ್ಲಿಂ ಹಬ್ಬದ ಸಂದರ್ಭದಲ್ಲಿ ಇಲ್ಲಿ ಸಾಮೂಹಿಕ ಪ್ರಾರ್ಥನೆಯೂ ನಡೆಯುತ್ತದೆ. ಇದನ್ನೂ ಕಿತ್ತುಕೊಂಡರೆ, ಎಲ್ಲಿಗೆ ಹೋಗುವುದು ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಾಂತರಕ್ಕೆ ಸಕಾರಣಗಳನ್ನೂ ನಿಗಮವು ನೀಡಿಲ್ಲ. ಏಕಪಕ್ಷೀಯವಾಗಿ ದಿಢೀರ್ ನಿರ್ಧಾರ ಕೈಗೊಂಡಿದೆ. ಸ್ಥಳೀಯರ ಅಭಿಪ್ರಾಯಗಳನ್ನೂ ಸಂಗ್ರಹಿಸಿಲ್ಲ. ನಿರ್ಧಾರ ಕೈಬಿಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಮೈದಾನದ ಕೆಳಗೆ ಮೆಟ್ರೋ ನಿಲ್ದಾಣ ನಿರ್ಮಾಣದಿಂದ ಹಿಂದೆಸರಿಯಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮೈದಾನ ಬಲಿಯಾಗುವುದರ ಜತೆಗೆ ಈ ಮಾರ್ಗದಲ್ಲಿ ನಾಲ್ಕೈದು ವರ್ಷಗಟ್ಟಲೆ ಸಂಚಾರದಟ್ಟಣೆ ಸಮಸ್ಯೆ ಉಂಟಾಗಲಿದ್ದು, ಸ್ಥಳೀಯರು ನರಕಯಾತನೆ ಅನುಭವಿಸಬೇಕಾಗುತ್ತದೆ ಎಂದು ಇದೇ ವೇಳೆ ಅಲವತ್ತುಕೊಂಡರು. ಮದಿನಾ ಮೈದಾನ ಕೂಡುವ ರಸ್ತೆಗಳು ಕಿರಿದಾಗಿವೆ. ಇನ್ನು ನಿಲ್ದಾಣ ನಿರ್ಮಾಣ ಕಾರ್ಯ ನಾಲ್ಕೈದು ವರ್ಷಗಟ್ಟಲೆ ನಿರಂತರವಾಗಿರುತ್ತವೆ. ಇದು ಹಿಂದಿನ ಅನುಭವದಿಂದಲೇ ಗೊತ್ತಾಗುತ್ತದೆ.
ಅಷ್ಟಕ್ಕೂ ತಾಂತ್ರಿಕವಾಗಿ ನೋಡಿದರೆ, ಕಂಟೋನ್‌ಮೆಂಟ್ ರೈಲು ನಿಲ್ದಾಣ ಬಳಿ ನಿರ್ಮಿಸುವುದೇ ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚು ಪ್ರಯಾಣಿಕರಿಗೂ ಇದರಿಂದ ಅನುಕೂಲ ಆಗುತ್ತದೆ. ಈ ಎಲ್ಲ ಹಿನ್ನೆಲೆಗಳಲ್ಲಿ ಬಿಎಂಆರ್‌ಸಿ ತನ್ನ ನಿರ್ಧಾರದಿಂದ ಹಿಂದೆಸರಿಯಬೇಕು ಎಂದು ನಿವಾಸಿಗಳು ಆಗ್ರಹಿಸಿದರು. ಸಯ್ಯದ್ ಸೈಫುದ್ದೀನ್, ಹಸೀಬ್ ಅಹಮ್ಮದ್, ನರೇಂದ್ರ ಕುಮಾರ್ ಸೇರಿದಂತೆ ಮತ್ತಿತರರು ನೇತೃತ್ವ ವಹಿಸಿದ್ದರು.