ಮೈಸೂರು: ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯ ಕೋಟಾ ಹಾಗೂ ಶುಲ್ಕವನ್ನು ಹೆಚ್ಚಳ ಮಾಡಬೇಕೆಂಬ ಸರ್ಕಾರದ ನಿರ್ಧಾರವನ್ನು ಖಂಡಿಸಿ ಎಐಡಿಎಸ್‌ಒ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಸರ್ಕಾರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಿಂದಿನ ವೈದ್ಯಕೀಯ ಸಚಿವರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರ ಕೋಟಾ ಜಾರಿಗೆ ತರುವ ಪ್ರಸ್ತಾಪವನ್ನು ಹಿಂದಿನ ಸದನದಲ್ಲಿ ಮಂಡಿಸಿದ್ದಾರೆ. ಈ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ
ಶೇ.10 ಅನಿವಾಸಿ ಭಾರತೀಯರ ಕೋಟಾ ಜಾರಿಗೆ ತಂದರೆ ಅದು ಸಂವಿಧಾನ ಬಾಹಿರವಾದುದು. ಇದು ನ್ಯಾಯಕ್ಕೆ ವಿರೋಧವಾಗಿದೆ. ಸೀಟುಗಳು ಕಡಿತವಾಗುತ್ತಾ ಹೋದಲ್ಲಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.
ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು ಶೇ.300 ರಿಂದ 600 ಪ್ರಮಾಣದಲ್ಲಿ ಹೆಚ್ಚಿಸಲು ರಾಜ್ಯ ಸರ್ಕಾರ ಪ್ರಸ್ತಾಪಿಸಿರುವುದು ಸರಿಯಲ್ಲ. ಬೆಲೆ ಏರಿಕೆ, ಬರ ಮುಂತಾದ ಸಮಸ್ಯೆಗಳಿಂದ ಜನ ತತ್ತರಿಸುತ್ತಿರುವಾಗ ಶುಲ್ಕ ಕಡಿಮೆ ಮಾಡುವ ಬದಲು 5- 6 ಪಟ್ಟು ಹೆಚ್ಚಳ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.
ಅನಿವಾಸಿ ಭಾರತೀಯ ಕೋಟಾವನ್ನು ಜಾರಿಗೆ ತರುವ ಹಾಗೂ ವೈದ್ಯಕೀಯ ಸ್ನಾತಕೋತ್ತರ ಶುಲ್ಕಗಳನ್ನು ಹೆಚ್ಚಿಸುವ ಪ್ರಸ್ತಾಪವನ್ನು ಕೈಬಿಡಬೇಕು. ಹೆಚ್ಚಿಸಿರುವ ವೈದ್ಯಕೀಯ ಪದವಿ ಶುಲ್ಕವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಎಐಡಿಎಸ್‌ಒ ರಾಜ್ಯಾಧ್ಯಕ್ಷೆ ಉಮಾದೇವಿ, ರಾಜ್ಯ ಸಮಿತಿ ಸದಸ್ಯೆ ಐಶ್ವರ್ಯಾ, ಜಿಲ್ಲಾ ಉಪಾಧ್ಯಕ್ಷ ಆಕಾಶ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಜಿಲ್ಲಾ ಖಜಾಂಚಿ ಅಸಿಯಾ ಬೇಗಂ, ಮೈಸೂರು ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಂದನ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.