ದಾವಣಗೆರೆ: ಮಧ್ಯ ಪ್ರದೇಶದ ಮಂದ್‌ದೌರ್ ನಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಘಟನೆ ಖಂಡಿಸಿ, ಶನಿವಾರ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತ್ಯೇಕವಾಗಿ ರೈಲು ನಿಲ್ದಾಣದ ಆವರಣದಲ್ಲಿ ಪ್ರತಿಭಟಿಸಿದ್ದಾರೆ. ಬೆಳಗ್ಗೆ 8.30ರ ರೈಲು ತಡೆಗೆ ಯತ್ನಿಸಿದ ಕಾರ್ಯಕರ್ತರನ್ನು ರೈಲ್ವೆ ನಿಲ್ದಾಣದ ಆವರಣದಲ್ಲೇ ಪೊಲೀಸರು ತಡೆದರು. ಆಗ ಕಾರ್ಯಕರ್ತರು ಅಲ್ಲಿಯೇ ಕೆಲಹೊತ್ತು ಧರಣಿ ನಡೆಸಿದರು.
ಈ ವೇಳೆ ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಘಟಕದ ಜಿಲ್ಲಾ ಉಪಾಧ್ಯಕ್ಷ ಹರೀಶ್ ಕೆಂಗಲಹಳ್ಳಿ, ಮಳೆಯಾಗದೇ ದೇಶಾದ್ಯಂತ ರೈತರು ಸಾಲು ಸಾಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಿಷ್ಟು ಸಿಕ್ಕ ಬೆಳೆಗೆ ಸೂಕ್ತ ಬೆಲೆ ಸಿಗದೇ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ.
ಮಧ್ಯ ಪ್ರದೇಶ ಮಂದ್‌ದೌರ್‌ನಲ್ಲಿ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿದ ಶಿವರಾಜ್ ಸಿಂಗ್ ಚವ್ಹಾಣ್ ನೇತೃತ್ವದ ಸರ್ಕಾರ, ರೈತರಪರ ದನಿ ಎತ್ತಿದ ನಮ್ಮ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನೂ ಸಹ ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತ 6 ಜನ ರೈತರು ಪ್ರಾಣ ತೆತ್ತಿದ್ದಾರೆ. ಇದೀಗ ಅವರ ಕುಟುಂಬ ಬೀದಿ ಪಾಲಾಗಿವೆ. ವೇದಿಕೆಗಳಲ್ಲಿ ಭಾಷಣ ಬಿಗಿಯುವ ಪ್ರಧಾನಿಯವರು ರೈತರ ಬಗ್ಗೆ ಎಲ್ಲೂ ಚಕಾರ ಎತ್ತುವುದಿಲ್ಲ. ವಿದೇಶದಲ್ಲಿ ಬಾಲಿವುಡ್ ನಟಿ ಭೇಟಿಗೆ ಸಮಯ ಹೊಂದಿರುವ ಪ್ರಧಾನಿ, ರೈತರ ಸಮಸ್ಯೆ ಕುರಿತು ಚರ್ಚಿಸಲು ಸಮಯ ಸಿಗದಿರುವುದು ವಿಷಾದನೀಯ ಎಂದು ಟೀಕಿಸಿದರು.
ಬಿಜೆಪಿಗೆ ಇದೀಗ ಅಧಿಕಾರದ ಮದವೇರಿದೆ. ಇದೇ ಕಾರಣಕ್ಕೆ ಅನ್ನದಾತರ ಬಲಿ ಪಡೆಯುತ್ತಿದೆ. ಈ ಹಿಂದೆ ಹಸಿರು ಶಾಲು ಹೊದ್ದುಕೊಂಡು ನಮ್ಮ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೊಬ್ಬರ ಕೇಳಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿದ್ದರು. ಬಿಜೆಪಿಯ ಬಹುತೇಕ ನಾಯಕರು ರಾಜಕೀಯ ಭಾಷಣ ಮಾಡುವಾಗ ಮಾತ್ರ ರೈತರನ್ನು ನೆನೆಯುತ್ತಾರೆ.
ಉಳಿದ ಕಾಲದಲ್ಲಿ ರೈತ, ಚಳವಳಿ, ರೈತರಪರ ದನಿ ಎತ್ತುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಾರೆ ಎಂದು ಅವರು ಆರೋಪಿಸಿದರು. ಇನ್ನೋರ್ವ ಉಪಾಧ್ಯಕ್ಷ ಪ್ರವೀಣ್ ಹುಲ್ಮನಿ, ಕಾರ್ಯದರ್ಶಿ ಪ್ರಮೋದ್, ಮುಖಂಡರಾದ ಜಾಫರ್, ಹರೀಶ್, ಆಫೂಜ್, ಚಂದ್ರು, ವಿನಯ್ ಹೋರಾಟದ ನೇತೃತ್ವ ವಹಿಸಿದ್ದರು.