ತಿಪಟೂರು: ವಿಷಮಿಶ್ರಿತ ರಾಸಾಯನಿಕ ನೀರಿನಿಂದ ಜನ ಜಾನುವಾರಗಳ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಕೂಡಲೇ ಚೆಂಡು ಹೂವಿನ ಕಾರ್ಖಾನೆ ಮುಚ್ಚಬೇಕೆಂದು ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕಾರ್ಖಾನೆಯ ಪರಿಸರ ವಿರೋಧಿ ಧೋರಣೆಯ ವಿರುದ್ಧ ಸಿಡಿದೆದ್ದ ರೈತರು ಮತ್ತು ಗಮಸ್ಥರು ಹಾಲ್ಕುರಿಕೆ ಮೂಲಕ ಕೊಳೆತ ಚೆಂಡು ಹೂವಿನ ತ್ಯಾಜ್ಯವನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಮತ್ತು ಕಾರ್ಮಿಕರನ್ನು ಕೊಂಡೊ ಯ್ಯತ್ತಿದ್ದ ವಾಹನ ತಡೆದು ಗ್ರಾಮ ಪಂಚಾಯಿತಿ ಮುಂಭಾಗ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರು, ಎವಿಟಿ ಕಾರ್ಖಾನೆಯಿಂದ ದುರ್ವಾಸನೆ ಹೊರಹೊಮ್ಮುತ್ತಿದ್ದು, ಹಾಲ್ಕುರಿಕೆ, ಬಸವರಾಜಪುರ, ಮಾಯಗೊಂಡನ ಹಳ್ಳಿ, ಗೊಲ್ಲರಹಟ್ಟಿ ಸೇರಿದಂತೆ ಚಿಕ್ಕ ನಾಯಕನಹಳ್ಳಿ ತಾಲೂಕಿನ ಕೆಲವು ಹಳ್ಳಿ ಜನ ತತ್ತರಿಸಿದ್ದಾರೆ. ದುರ್ನಾತದಿಂದ ಗ್ರಾಮದಲ್ಲಿ ವಾಸ ಮಾಡಲಾಗದೇ ಜನರ ಉಸಿರುಗಟ್ಟಿಸುತ್ತಿದೆ. ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಅಲ್ಲದೆ, ಕಲುಷಿತ ನೀರು ಅಂತರ್ಜಲ ಹಾಳು ಮಾಡುತ್ತಿದೆ. ಸಮಸ್ಯೆಗಳ ವಿರುದ್ಧ ದೂರು ನೀಡಿದರೆ ಸ್ಥಳಕ್ಕೆ ಬರುವ ಅಧಿಕಾರಿಗಳು ನಂತರ ನಮಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ನಡೆದುಕೊಳ್ಳುತ್ತಾರೆ ಎಂದು ದೂರಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸಂಬಂಧಿತ ಇಲಾಖೆಗಳು ಕಾರ್ಖಾನೆಯೊಂದಿಗೆ ಶಾಮೀಲಾಗಿ ಮಾಲಿನ್ಯ ನಿಯಂತ್ರಣ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಗ್ರಾಪಂ ಸದಸ್ಯ ಎಚ್.ವಿ.ನಾಗರಾಜು, ಮಳೆಗಾಲ ಬಂದರೆ ತ್ಯಾಜ್ಯದ ನೀರನ್ನು ರೈತರ ಜಮೀನುಗಳಿಗೆ ಹರಿಸಿ ಬೆಳೆ ನಷ್ಟ ಮಾಡುವ ಜೊತೆಗೆ ಭೂಮಿ ಫಲವತ್ತತೆ ಹಾಳುಮಾಡಿ ಭೂಮಿ ಬರಡು ಮಾಡುವ ಹುನ್ನಾರವು ನಡೆಯುತ್ತಿದೆ.
ವಾಸನೆಯಿಂದ ಜನರಲ್ಲಿ ತೀವ್ರ ತಲೆನೋವು, ವಾಕರಿಕೆ, ಉಸಿ ರಾಟದ ತೊಂದರೆ, ಕೆಮ್ಮು ಮುಂತಾದ ಮಾರಣಾಂತಿಕ ರೋಗಗಳು ಬರುತ್ತಿವೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಹೇಳಿದರು. ಸ್ಥಳಕ್ಕೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿ ಕಾರಿಗಳು ಆಗಮಿಸಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿ ಸಿದರು. ಮುಖಂಡರಾದ ನಾಗ ಭೂಷಣ, ಗುರುಮೂರ್ತಿ, ಹೋಟೆಲ್ ಮಲ್ಲಿಕಾರ್ಜುನ್, ಚಂದ್ರಶೇಖರ್, ಅಶ್ವತ್ಥನಾರಾಯಣ, ಪರಮೇಶ್ ಭಾಗವಹಿಸಿದ್ದರು.