ಬೆಂಗಳೂರು: ಮೈಸೂರು, ರಾಯಚೂರು, ಶಿವಮೊಗ್ಗ ಸಹಿತ ಉಡಾನ್ ಯೋಜನೆಯಡಿ ನಿರ್ಮಾಣಗೊಂಡಿರುವ ನೂತನ ವಿಮಾನ ನಿಲ್ದಾಣಗಳ ನಿರ್ವಹಣೆ ರಾಜ್ಯ ಸರಕಾರಕ್ಕೆ ವಹಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ವಾರ ದಿಲ್ಲಿಯಲ್ಲಿ ನಾಗರಿಕ ವಿಮಾನಯಾನ ಸಚಿವರೊಂದಿಗೆ ಮೂಲಸೌಕರ್ಯ ಅಭಿವೃದ್ಧಿ ಸಚಿವರ ಸಭೆ ನಡೆಯಲಿದ್ದು, ಅಲ್ಲಿ ರಾಜ್ಯದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ನೂತನ ವಿಮಾನ ನಿಲ್ದಾಣಗಳ ನಿರ್ವಹಣೆಗೆ ಕೇಂದ್ರ ಸರಕಾರ ತಮ್ಮ ಪಾಲಿನ ನೆರವು ಒದಗಿಸಿದರೆ ರಾಜ್ಯ ಸರಕಾರವೇ ನಿರ್ವಹಣೆ ಮಾಡಲಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೂ ಆದಾಯ ಬರಲಿದೆ ಎಂದು ತಿಳಿಸಿದರು.
ಮೈಸೂರು, ಕಲಬುರಗಿ ವಿಮಾನ ನಿಲ್ದಾಣಗಳು ಈಗ ಕಾರ್ಯಾಚರಣೆ ಮಾಡುತ್ತಿದ್ದು ರಾಯಚೂರು, ಬೀದರ್, ಶಿವಮೊಗ್ಗ ವಿಮಾನ ನಿಲ್ದಾಣಗಳು ಸದ್ಯದಲ್ಲೇ ಕಾರ್ಯಾರಂಭ ಮಾಡಲಿವೆ. ಈ ಎಲ್ಲ ವಿಮಾನ ನಿಲ್ದಾಣಗಳ ನಿರ್ವಹಣೆ ರಾಜ್ಯ ಸರಕಾರಕ್ಕೆ ಒಪ್ಪಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು.
ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಮಿನಿ ಏರ್‌ಪೋರ್ಟ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ ಭಾಗದಲ್ಲಿ ಅಧ್ಯಯನ ನಡೆಸಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.