Advertisement

4 ವರ್ಷಗಳ ಹಿಂದೆಯೇ ನಿಷೇಧ

03:51 PM Sep 07, 2018 | |

ಗದಗ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಗಣೇಶ ಮೂರ್ತಿಗಳ ನಿಷೇಧಿಸುವಂತೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸುವ ಮುನ್ನವೇ ಜಿಲ್ಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ವಿರುದ್ಧ ಹೋರಾಟ ಜೋರಾಗಿತ್ತು. ಇದರ ಫಲವಾಗಿ ಕಳೆದ ನಾಲ್ಕೈದು ವರ್ಷಗಳಿಂದ ಜಿಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಅದಕ್ಕೆ ಸರ್ವಜನಿಕರಿಂದಲೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.

Advertisement

ಪ್ರತಿ ವರ್ಷ ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಪಿಒಪಿ ಗಣೇಶ ಮೂರ್ತಿಗಳ ನಿಷೇಧಕ್ಕೆ ಒತ್ತಾಯಿಸಿ ಪರಿಸರವಾದಿಗಳು ಹಾಗೂ ವಿವಿಧ ಸಂಘಟನೆಗಳು ಬೀದಿಗಿಳಿಯುವುದು ಸಹಜ. ಅದರಂತೆ 2010ರಲ್ಲಿ ಇಲ್ಲಿನ ಮಣ್ಣಿನ ಮೂರ್ತಿಗಳ ತಯಾರಕರ ಸಂಘದಿಂದ ಪ್ರತಿಭಟನೆಗಳು ಜೋರಾಗಿದ್ದವು. ಆದರೆ, ಆರಂಭದಲ್ಲಿ ಸರಕಾರಿ ಆಡಳಿತ ವ್ಯವಸ್ಥೆಯಿಂದ ಅದಕ್ಕೆ ಅಷ್ಟಾಗಿ ಸ್ಪಂದನೆ ಸಿಕ್ಕಿರಲಿಲ್ಲ. 

ಆನಂತರ ಎದುರಾದ ಸತತ ಬರಗಾಲ, ನೀರಿನ ಮೂಲಗಳು ಬತ್ತಿದ್ದರಿಂದ ಜನರು ಜೀವಜಲಕ್ಕಾಗಿ ಪರದಾಡುವಂತಾಯಿತು. ಸಮಸ್ಯೆ ಗಂಭೀರತೆ ಅರಿತ ಅಂದಿನ ಜಿಲ್ಲಾಧಿಕಾರಿ ಪ್ರಸನ್ನಕುಮಾರ್‌, ಜಲ ಮೂಲಗಳನ್ನು ಸುಸ್ಥಿತಿಯಲ್ಲಿ ಕಾಪಾಡುವ ನಿಟ್ಟಿನಲ್ಲಿ 2014ರಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಬದಲು ಮಣ್ಣಿನ ಮೂರ್ತಿಗಳಿಗೆ ಒತ್ತು ನೀಡುವಂತೆ ಆದೇಶಿದ್ದರು. ಕಳೆದ ಎರಡು ವರ್ಷಗಳಿಂದ ಗಣೇಶ ವಿಸರ್ಜನೆಗೆ ಕೃತಕ ಹೊಂಡಗಳನ್ನು ವ್ಯವಸ್ಥೆ ಮಾಡುತ್ತಿದ್ದು, ಇದು ಜಿಲ್ಲೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದೆ.

ಆ ನಂತರ ವರ್ಷದಿಂದ ವರ್ಷಕ್ಕೆ ಈ ನಿಯಮಾವಳಿ ಕಠಿಣಗೊಳಿಸಲಾಯಿತು. ಕಳೆದ ವರ್ಷ ಗಣೇಶ ಹಬ್ಬದ ಪ್ರಯುಕ್ತ ಸಿದ್ಧಗೊಳಿಸಿದ್ದ ಗಜೇಂದ್ರಗಡದಲ್ಲಿ 250, ಬೆಳ್ಳಟ್ಟಿ 50 ಪಿಒಪಿ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಜಿಲ್ಲೆಯ ಆಯ್ದ ಭಾಗದಲ್ಲಿ ಪೊಲೀಸ್‌ ಚೆಕ್‌ ಪೋಸ್ಟ್‌ ಸ್ಥಾಪಿಸುವ ಮೂಲಕ ಹೊರಗಡೆಯಿಂದ ಆಮದು ಮಾಡಿಕೊಳ್ಳುವುದಕ್ಕೂ ಕಡಿವಾಣ ಹಾಕಿದ್ದು ವಿಶೇಷ.

25 ಸಾವಿರ ಮೂರ್ತಿಗಳು ಬೇಡಿಕೆ: ಹಿಂದೂ ಸಂಪ್ರದಾಯದಲ್ಲಿ ವಿಘ್ನನಿವಾರಕ, ಲಂಬೋಧರನಿಗೆ ವಿಶೇಷ ಆದ್ಯತೆ. ಪ್ರಥಮ ಪೂಜಿತ ಎಂದು ಕರೆಸಿಕೊಳ್ಳುವ ವಿನಾಯಕ ಮೂರ್ತಿಗಳಿಗೆ ಜಿಲ್ಲೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಗದಗ ನಗರವೊಂದರಲ್ಲೇ 150 ಸಾರ್ವಜನಿಕ ಸೇರಿದಂತೆ ಜಿಲ್ಲೆಯಾದ್ಯಂತ ಮನೆ ಹಾಗೂ ಸಾರ್ವಜನಿಕ ಸೇರಿ ಸುಮಾರು 25 ಸಾವಿರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಆದರೆ, ಪಿಒಪಿ ನಿಷೇಧದಿಂದ ಗಣೇಶ ಹಬ್ಬ ಆಚರಣೆ ಮೇಲೆ ಯಾವುದೇ ರೀತಿ ಪರಿಣಾಮ ಬೀರಿಲ್ಲ ಎನ್ನುತ್ತಾರೆ ಮಣ್ಣಿನ ಗಣೇಶ ಮೂರ್ತಿಗಳ ತಯಾರಕರ ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಭರಡಿ.

Advertisement

ಈಗಾಗಲೇ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾನೆಯನ್ನು ರಾಜ್ಯ ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿಯಿಂದ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಮಂಡಳಿಯಿಂದ ದಂಡವಿಧಿಸಲಷ್ಟೇ ಅವಕಾಶವಿದ್ದು, ಪೊಲೀಸ್‌ ಪ್ರಕರಣ ದಾಖಲಿಸಲು ಕಾನೂನಿಲ್ಲ. ಜನರು ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿ ಸುವುದರಿಂದ ತಾವು ತಿನ್ನುವ ಅನ್ನ, ಕುಡಿಯುವ ನೀರಿಗೆ ವಿಷ ಬೆರೆಸಿದಂತಾಗುತ್ತದೆ. ಈ ಸತ್ಯವನ್ನು ಅರಿತು ಗಣೇಶ ಹಬ್ಬವನ್ನು ಪರಿಸರ ಪೂರಕವಾಗಿ ಆಚರಿಸಬೇಕು.
 . ಸಂತೋಷ ಬಾಬು, ಎಸ್‌ಪಿ ಗದಗ

  ವೀರೇಂದ್ರ ನಾಗಲದಿನ್ನಿ 

Advertisement

Udayavani is now on Telegram. Click here to join our channel and stay updated with the latest news.

Next