“ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಅನ್ಯಾಯವಾಗುತ್ತಿದೆ, ಅಗತ್ಯವಿರದಿದ್ದರೂ ಕೆಲ ಚಿತ್ರಗಳಿಗೆ “ಎ’ ಪ್ರಮಾಣ ಪತ್ರ ನೀಡುವ ಮೂಲಕ, ಹೊಸ ನಿರ್ಮಾಪಕರ ಮೇಲೆ ದಬ್ಟಾಳಿಕೆ ನಡೆಸುತ್ತಿದೆ, ಸೆನ್ಸಾರ್ ಮಂಡಳಿಯ ನಡೆಯಿಂದಾಗಿ ವ್ಯಾಪಾರ, ವಹಿವಾಟಕ್ಕೂ ಸಮಸ್ಯೆ ಎದುರಾಗಿದೆ….’
– ಹೀಗೆ ದೂರುವ ಮೂಲಕ ಬುಧವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟಿಸಿದ್ದು ಕನ್ನಡ ಚಿತ್ರರಂಗದ ಹಲವು ನಿರ್ಮಾಪಕ, ನಿರ್ದೇಶಕರು. ಇಷ್ಟಕ್ಕೂ ಕೆಲ ನಿರ್ಮಾಪಕ, ನಿರ್ದೇಶಕರು ಸೆನ್ಸಾರ್ ಮಂಡಳಿ ವಿರುದ್ಧ ಪ್ರತಿಭಟನೆಗಿಳಿಯಲು ಮುಖ್ಯ ಕಾರಣ, ಸೆನ್ಸಾರ್ ಮಂಡಳಿಯ ನಡೆ.
ಹೌದು, ಸೆನ್ಸಾರ್ ಮಂಡಳಿಯು ಉದ್ಯಮಕ್ಕೆ ಬೇಸರ ತರಿಸಿದೆ, ನಿಗದಿತ ವೇಳೆಗೆ ಚಿತ್ರಗಳನ್ನು ವೀಕ್ಷಿಸಿ, ಪ್ರಮಾಣ ಪತ್ರ ಕೊಡುತ್ತಿಲ್ಲ. ಅಗತ್ಯ ಇರದಿದ್ದರೂ, ಕತ್ತರಿ ಹಾಕಬೇಕು ಎಂಬ ಸೂಚನೆ ಕೊಡುವುದಲ್ಲದೆ, ಕತ್ತರಿ ಹಾಕಲು ಒಪ್ಪದ ಚಿತ್ರಗಳಿಗೆ ‘ಎ’ ಪ್ರಮಾಣ ಪತ್ರ ಕೊಡುತ್ತಿದೆ. ಇದರಿಂದ ಹೊಸ ನಿರ್ಮಾಪಕರು, ನಿರ್ದೇಶಕರು ಕಷ್ಟ ಎದುರಿಸಬೇಕಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪ.
ಸೆನ್ಸಾರ್ ಮಂಡಳಿಯ ನಿಧಾನಗತಿಯಿಂದಾಗಿ, ಚಿತ್ರಗಳಿಗೆ ಸೆನ್ಸಾರ್ ಬೇಗ ಆಗುತ್ತಿಲ್ಲ. ಇದರಿಂದ ಚಿತ್ರಗಳನ್ನು ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಸಾಲ ಮಾಡಿ ಚಿತ್ರ ನಿರ್ಮಿಸಿರುವ ನಿರ್ಮಾಪಕರು ಬಡ್ಡಿ ಕಟ್ಟಲಾಗದೆ ಒದ್ದಾಡುವಂತಾಗಿದೆ. ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ಕೊಡುವುದರಿಂದ ಸಬ್ಸಿಡಿಗೆ, ಸ್ಯಾಟಲೈಟ್ಸ್ ವ್ಯಾಪಾರ ವಹಿವಾಟಕ್ಕೆ ಅಡ್ಡಿಯಾಗುತ್ತಿದೆ.
ಇದೆಲ್ಲದರ ಜೊತೆಗೆ ಸೆನ್ಸಾರ್ ಮಂಡಳಿ ನಿರ್ಮಾಪಕ, ನಿರ್ದೇಶಕರನ್ನು ಅಗೌರವದಿಂದ ನೋಡಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದವರು ನಿರ್ಮಾಪಕರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು. “ರವಿಹಿಸ್ಟರಿ’, “ಆದಿಪುರಾಣ’ ಮತ್ತು “ಮೂರ್ಕಲ್ ಎಸ್ಟೇಟ್’ ಸೇರಿದಂತೆ ಅನೇಕ ಚಿತ್ರಗಳಿಗೆ “ಎ’ ಪ್ರಮಾಣ ಪತ್ರ ಕೊಡಲಾಗಿದ್ದು, ಅಗತ್ಯವಿರದ ದೃಶ್ಯಗಳಿಗೆ ಕತ್ತರಿ ಹಾಕಬೇಕು,
ಇಲ್ಲವಾದಲ್ಲಿ “ಎ’ ಪ್ರಮಾಣ ಪತ್ರಕೊಡುವುದಾಗಿ ಸೆನ್ಸಾರ್ ಮಂಡಳಿ ಅಧಿಕಾರಿಗಳು ಸೂಚಿಸುವ ಮೂಲಕ ನಿರ್ಮಾಪಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂಬ ಆರೋಪ ನಿರ್ಮಾಪಕರದು. ಅಂದಹಾಗೆ, ಪ್ರತಿಭಟನೆಯಲ್ಲಿ ನಿರ್ಮಾಪಕರಾದ ಕಾರ್ತಿಕ್, ಶಮಂತ್, ಕುಮಾರ್ ಭದ್ರಾವತಿ ಸೇರಿದಂತೆ ಅನೇಕರು ಪಾಲ್ಗೊಂಡು, ಸೆನ್ಸಾರ್ ಮಂಡಳಿ ವರ್ತನೆ ವಿರುದ್ಧ ಘೋಷಣೆ ಕೂಗಿದರು.