Advertisement
ರಾಮನಗರ ಜಿಲ್ಲಾ ಕೇಂದ್ರವಾಗಿ 15 ವರ್ಷಗಳೇ ಕಳೆದರೂ ಒಂದು ಸುಸಜ್ಜಿತವಾದ ಗ್ರಂಥಾಲಯ ಇಲ್ಲವೆಂಬ ಕೊರಗು ಓದುಗರನ್ನು ಕಾಡುತ್ತಿದೆ. ಈ ಜಿಲ್ಲಾ ಕೇಂದ್ರದಲ್ಲಿ ಇರುವ ಒಂದೇ ಇಂದು ಲೈಬ್ರರಿ ಅದು ಸೋರುತ್ತಿದೆ. ಅಲ್ಲದೆ, ಮೂರು ಕೊಠಡಿಗಳಷ್ಟೇ ಇದ್ದು, ಇದರಿಂದ ಒದುಗರಿಗೆ ತುಂಬಾ ತೊಂದರೆಯಾಗಿದೆ. ಆದರೂ, ಓದುವ ಹಂಬಲದಿಂದ ಬರುವ ಓದುಗರು ಇಕ್ಕಟ್ಟಿನಲ್ಲಿ ಒತ್ತರಿಸಿಕೊಂಡು ಕುಳಿತು ಓದಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಭೂಮಿಪೂಜೆ ನಡೆದಿಲ್ಲ: ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ಹೇಳುವ ಪ್ರಕಾರ ಸರ್ಕಾರ ಅನುಮೋದನೆ ನೀಡಿ ವರ್ಷಗಳೇ ಕಳೆದು ಹೋಗಿದೆ. ಆದರೂ, ಇನ್ನೂ ಹೊಸ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿಲ್ಲ. ಆ ಕಾರ್ಯಕ್ಕೂ ಚುನಾವಣೆ ಸಮೀಪಿಸಬೇಕೋ ಏನೋ ಎಂಬ ಗುಸುಗುಸು ಆರಂಭವಾಗಿದೆ.
ಉಪಯೋಗ ಇಲ್ಲ: ಪ್ರತಿನಿತ್ಯ ಗ್ರಂಥಾಲಯಕ್ಕೆ 200ರಿಂದ 300 ಓದುಗರು ಬರುತ್ತಾರೆ. ಅವರೆಲ್ಲ ರಿಗೂ ಕುಳಿತುಕೊಳ್ಳಲೂ ಜಾಗ ಇಲ್ಲದ ಸ್ಥಿತಿ ಇದೆ. ಗ್ರಂಥಾಲಯದ ಕಾಂಪೌಂಡ್‌ನಲ್ಲಿ ಕುಳಿತು ಪತ್ರಿಕೆ ಓದಲೆಂದು ತಾತ್ಕಾಲಿಕ ಶೆಲ್ಟರ್ ನಿರ್ಮಾಣ ಮಾಡಿದ್ದಾರೆ. ಅದೂ ಅವೈಜ್ಞಾನಿಕವಾಗಿದ್ದು, ಕಾಮಗಾರಿ ಸರಿಯಿಲ್ಲದ ಕಾರಣ ಉಪಯೋಗ ಇಲ್ಲದಂತಾಗಿದೆ.
ಪುಸ್ತಕ ಇಡಲು ಜಾಗ ಇಲ್ಲ: ಚಾವಣಿಯೇ ಸೋರುತ್ತಿರುವ ಕಾರಣ, ಇಲ್ಲಿ ಪುಸ್ತಕಗಳಿಗೂ ರಕ್ಷಣೆ ಇಲ್ಲ ಎನ್ನುವಂತಾಗಿದೆ. ಈಗಾಗಲೇ 45 ಸಾವಿರಕ್ಕೂ ಹೆಚ್ಚಿನ ಹೊತ್ತಿಗೆಗಳ ಸಂಗ್ರಹ ಇದ್ದು, ಹೊಸ ಪುಸ್ತಕಗಳನ್ನು ಇಡಲು ಜಾಗವೇ ಇಲ್ಲದಂತೆ ಆಗಿದೆ.
ಹೊಸ ಕಟ್ಟಡ ನಿರ್ಮಾಣಕ್ಕೆ ಪತ್ರ ವ್ಯವಹಾರ: ಜಿಲ್ಲಾ ಗ್ರಂಥಾಲಯಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕೆ ಡಿಪಿಆರ್ ಸಲ್ಲಿಕೆಯಾಗಿ ಮೂರು ವರ್ಷಗಳೇ ಕಳೆದಿವೆ. ಸದ್ಯ ಹಳೇ ಗ್ರಂಥಾಲಯವು 60ಘಿ90 ಚ.ಅಡಿ ವಿಸ್ತೀರ್ಣದಲ್ಲಿದ್ದು, ಈ ಕಟ್ಟಡ ಕೆಡವಿ ಅಲ್ಲಿಯೇ ಹೊಸ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ.
ಪ್ರಸ್ತಾವ ಕೂಡ ಸಲ್ಲಿಕೆ: 2018ರ ಜು.23ರಂದು ಅಂದಿನ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಸಭೆ ನಡೆಸಿ, ಹೊಸ ಜಿಲ್ಲಾ ಗ್ರಂಥಾಲಯ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ 9.94 ಕೋಟಿ ರೂ.ನಲ್ಲಿ ಹೊಸ ಗ್ರಂಥಾಲಯ ನಿರ್ಮಾಣಕ್ಕೆ ಪ್ರಸ್ತಾವ ಕೂಡ ಸಲ್ಲಿಕೆಯಾಗಿತ್ತು. 2019ರ ಜೂ.6ರಂದು ಆರ್ಥಿಕ ಇಲಾಖೆಯು ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಮೊದಲ ಹಂತದಲ್ಲಿ 4.95 ಕೋಟಿ ರೂ.ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಿತ್ತು.
ಆದರೆ, ನಂತರದಲ್ಲಿ ಸರ್ಕಾರ ಕೇವಲ 1.24 ಕೋಟಿ ರೂ. ಮಾತ್ರ ಹಂಚಿಕೆ ಮಾಡಿತ್ತು. ಇದರಿಂದಾಗಿ ಕಾಮಗಾರಿ ಆರಂಭಗೊಳ್ಳಲು ಆಗಿಲ್ಲ. ಇದು ಹರ ಕೊಲ್ಲಲ್ ಪರ ಕಾಯÌನೇ ಎನ್ನುವಂತಾಗಿದ್ದು ನಮ್ಮನ್ನಾಳುವ ಅಧಿಕಾರ ಶಾಹಿ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲವಾದ್ರೆ ಯೋಜನೆಗಳು ಹಳ್ಳ ಹಿಡಿಯುತ್ತವೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಅವ್ಯವಸ್ಥೆಗಳ ಆಗರ ಅಂದ್ರೆ ನಮ್ಮ ಗ್ರಂಥಾಲಯ. ಇತ್ತೀಚೆಗಷ್ಟೇ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಶೌಚಕ್ಕೆ ಇರಲಿ, ಇಲ್ಲಿ ಕುಡಿಯುವ ನೀರಿಗೂ ತತ್ವಾರ ಇದೆ. ಹಳೇ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಮಳೆ ಬಂದರೆ ಸೋರುತ್ತದೆ. ವಿದ್ಯುತ್ ಶಾಕ್ ಕೂಡ ಹೊಡೆಯುತ್ತದೆ. ಇಲ್ಲಿ ಜೀವಭಯದಲ್ಲೇ ಪುಸ್ತಕ ಓದಬೇಕಾದ ಸ್ಥಿತಿ ನಿರ್ಮಾಣವಾಗಿದೆ. –ಶಿವಕುಮಾರ, ಓದುಗ.
– ಎಂ.ಎಚ್.ಪ್ರಕಾಶ್