ಮುಂದುವರೆಯುತ್ತಿರುವ ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವು ಮಾನವನಿಗೆ ಮಾರಕವಾಗಿ ಮಾರ್ಪಡುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಈ ಮೊಬೈಲ್ ಎಂಬ ಮಾಯಾವಿಯು ಜೀವಕ್ಕೆ ಪರಿಣಾಮಕಾರಿಯಾದ ಕುತ್ತು ತರುತ್ತಿದೆ. ಏಕೆಂದರೆ ಮನುಷ್ಯ ಇಂದು ಹೆಚ್ಚು ಸಮಯವನ್ನು ಕಳೆಯುತ್ತಿರುವುದು ಮೊಬೈಲ್ನ ಜತೆಯಲ್ಲಿಯೇ, ಅದರಲ್ಲೂ ವಿಶೇಷವಾಗಿ ರೀಲ್ಸ್ ನೋಡುವ ಭರದಲ್ಲಿಯೇ ಎಂಬುದು ನಿಸ್ಸಂಶಯವಾದ. ಇದರ ಪ್ರಭಾವದಿಂದಾಗಿ ಮಾನವ ಸಂಬಂಧಗಳಂತೂ ತೀರಾ ಹಳಸಿದಂತಾಗಿ ನಶಿಸುತ್ತಾ ಹೋಗುತ್ತಲಿವೆ.
ಇತ್ತೀಚಿನ ದಿನಗಳಲ್ಲಿ ಈ ಮೊಬೈಲ್ನಿಂದ ಜನರು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ಈಗ ರೀಲ್ಸ್ ಎಂಬ ಮತ್ತೂಂದು ಹೊಸದಾದ ಮೋಡಿ ಮಾಡುವ ಪಾಶಾವಿಯನ್ನು ಯಮಧರ್ಮರಾಜನು ಪ್ರಚಾರಪ್ರೀಯರಿಗೆ ಪರಿಚಯಿಸಿ ತನ್ನೆಡೆಗೆ ಸೆಳೆದುಕೊಳ್ಳುತ್ತಿದ್ದಾನೆ. ಈಗ ಎಲ್ಲೆಂದರಲ್ಲಿ ಬರೀ ರೀಲ್ಸ್ನ ಸಂಭ್ರಮ ಹೆಚ್ಚಾಗತೊಡಗಿದೆ.
ದಿಢೀರ್ ಎಂದು ಬೆಳಗಾಗುವಷ್ಟರಲ್ಲಿಯೇ ದೇಶಾದ್ಯಂತ, ಜಗತ್ತಿನಾದ್ಯಂತ ಹೆಸರು ಮಾಡಿ ಪ್ರಸಿದ್ಧರಾಗಿಬಿಡೋಣ ಅನ್ನೋದೇ ಈ ರೀಲ್ಸ್ನ ಪ್ರಮುಖ ಉದ್ದೇಶ. ತಾವು ಮಾಡುವ ರೀಲ್ಸ್ ಅನ್ನು ಈ ಹಿಂದೆ ಯಾರೂ ಮಾಡಿರಬಾರದು ಹಾಗೂ ಇದರಲ್ಲಿ ಹೊಸತನ ಇರಬೇಕು, ಇದನ್ನು ನೋಡಿ ಜನರೆಲ್ಲರೂ ದಿಗ್ಭ್ರಾಂತರಾಗಬೇಕು ಎನ್ನುವ ಹಪಹಪಿ ಈಗಿನ ಯುವಜನರನ್ನು ಕಾಡುತ್ತಲಿದೆ. ಲಕ್ಷಗಟ್ಟಲ್ಲೆ ಲೈಕ್ಗಳು ಸಿಗಲಿ, ಎಲ್ಲರಿಗಿಂತಲೂ ಹೆಚ್ಚಿನ ಕಾಮೆಂಟ್ಸ್ ಬರಲಿ ಎನ್ನುವ ದು(ದೂ)ರಾಲೋಚನೆಯಲ್ಲಿಯೇ ಇಂದಿನ ಯುವಜನತೆ ಕಾಲಹರಣ ಮಾಡಿ ಜೀವನದಲ್ಲಿ ಏನನ್ನೂ ಸಾಧಿಸಲಾಗದೆ, ಸಂಪೂರ್ಣ ವಿಫಲರಾಗಿ ಹತಾಶರಾಗುತ್ತಿದ್ದಾರೆ. ಈ ಹತಾಶೆಯು ಸಾವಿರಾರು ಕ್ರೌರ್ಯದ ಕೆಲಸಗಳಿಗೆ ಪ್ರೇರಣೆಯಾಗಿ ಸಾಮಾಜಿಕವಾಗಿ ಮಾರಕವಾಗುತ್ತಿದೆ.
ಸಾಮಾಜಿಕ ಜಾಲಜಾಣಗಳನ್ನು ನೋಡಲು ಶುರು ಮಾಡುತ್ತಿದ್ದಂತೆಯೇ ಈ ರೀಲ್ಸ್ಗಳ ಹಾವಳಿ ವಿಪರೀತವಾಗಿ ಕಾಡುತ್ತಿವೆ. ಇದ್ದಕ್ಕಿದ್ದಂತೆಯೇ ನಮ್ಮ ಇಡೀ ದಿನದ ಸಮಯವನ್ನು ಇದರಲ್ಲಿಯೇ ಕಳೆಯುಷ್ಟರ ಮಟ್ಟಿಗೆ ಇವು ಮೋಡಿ ಮಾಡಿ ಆಕರ್ಷಿಸುತ್ತಿವೆ. ಗಂಡು-ಹೆಣ್ಣು ಎಂಬ ಬೇಧ-ಭಾವವಿಲ್ಲದೆ, ವಯಸ್ಸಿನ ಇತಿ-ಮಿತಿ ಇಲ್ಲದೇ, ಅಬಾಲವೃದ್ಧರಾದಿಯಾಗಿ ಎಲ್ಲರೂ ಈ ರೀಲ್ಸ್ನಲ್ಲಿ ಮುಳುಗಿ ಬಿಟ್ಟಿದ್ದಾರೆ. ಜನರು ಮೊಬೈಲ್ ಎಂಬ ಮಾಯಾವಿಯ ಹೊಡೆತಕ್ಕೆ ಸಿಕ್ಕು ವಿಲವಿಲ ಎಂದು ಒದ್ದಾಡುವ ಸ್ಥಿತಿಗೆ ಬಂದಿದ್ದಾರೆ.
ಬಿಡುವು ಸಿಕ್ಕಾಗ ಒಂದೈದು ನಿಮಿಷ ಮೊಬೈಲ್ ನೋಡಿ ನಾನು ನನ್ನ ಮುಂದಿನ ಕೆಲಸಕ್ಕೆ ಅಣಿಯಾಗುತ್ತೇನೆಂದು ನಿಮ್ಮ ಮೊಬೈಲ್ ಸ್ಕ್ರೀನ್ನ ಲಾಕ್ ಅನ್ನು ಓಪನ್ ಮಾಡಿ ಕುಳಿತು ಮತ್ತದೇ ಲಾಕ್ನ್ನು ಆಫ್ ಮಾಡುವಷ್ಟರಲ್ಲಿ ಐದು ನಿಮಿಷದ ಬದಲು ಐದು ತಾಸಿನ ಸಮಯ ಈ ರೀಲ್ಸ್ನಲ್ಲಿ ಕಳೆದು ಹಾಳಾಗಿದ್ದು ಇಂದಿನ ಯುವಜನತೆಗೆ ಕಿಂಚಿತ್ತೂ ಗೊತ್ತಾಗುವುದೇ ಇಲ್ಲ. ಹೀಗೆ ಈ ರೀಲ್ಸ್ನಲ್ಲಿಯೇ ಇಡೀ ದಿನ ಅಷ್ಟೆ ಅಲ್ಲ ಇಡೀ ಜೀವನ ವ್ಯರ್ಥವಾಗಿ ಹೋದರೆ ಸಾಧನೆ ಮಾಡುವುದಾದರೂ ಹೇಗೆ? ಬಂಗಾರದಂತಹ ವಿದ್ಯಾರ್ಥಿ ಜೀವನದಲ್ಲಿ ಇದು ಅತ್ಯಂತ ಮಾರಕವಾಗಿ ಪರಿಣಮಿಸಿ ಮುಂದುವರೆಯುತ್ತಿರುವ ಈ ಆಧುನಿಕ ಜಗತ್ತನ್ನು ಸರ್ವನಾಶ ಮಾಡುವುದಕ್ಕಾಗಿಯೇ ಈ ಮೊಬೈಲ್ನ ಸಂಶೋಧನೆ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ನಗರ ಜನತೆಯಷ್ಟೇ ಅಲ್ಲ ಇಂದಿನ ಹಳ್ಳಿಯ ಜನರೂ ಕೂನ ತಮ್ಮ ಅತ್ಯಮೂಲ್ಯವಾದ ಕೃಷಿ ಚಟುವಟಿಕೆಗಳನ್ನು ಬದಿಗೊತ್ತಿ ಈ ರೀಲ್ಸ್ನ ನಿರಂತರ ಪ್ರಭಾವಕ್ಕೊಳಗಾಗಿ ಹುಲುಸಾಗಿ ಬೆಳೆದ ಪೈರನ್ನು ನಾಶಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಇಳುವರಿಯ ಕೊರತೆಯಿಂದಾಗಿ ಸಾಲ ಮಾಡಿ, ತದನಂತರ ಗೋಳಾಡುತ್ತಾ ಪರಿತಪಿಸುವಂತಹ ಘಟನೆ ಇದು ಕೂಡ ಒಂದು ಕಾರಣವಾಗಿದೆ ಎಂದರೆ ನಂಬಲೇಬೇಕು.
ಹೀಗೆ ಈ ರೀಲ್ಸ್ ನ ಅಟ್ಟಹಾಸದಿಂದ ಪ್ರತಿಯೊಬ್ಬರ ಅತ್ಯಮೂಲ್ಯವಾದ ಸಮಯ ನಿರಂತರವಾಗಿ ವ್ಯರ್ಥವಾಗುತ್ತಾ ಹಾಳುಗುತ್ತಲೇ ಇದೆ. ಹೀಗೆ ಈ ರೀಲ್ಸ್ನ ಪ್ರಭಾವ ವಯಸ್ಸಿನ ಇತಿಮಿತಿಗಳಿಲ್ಲದೆ, ಎಲ್ಲ ವರ್ಗದ ಜನರನ್ನು ನಾಶ ಮಾಡುತ್ತಲಿದೆ. ತನ್ನ ಅಗಾಧವಾದ ಕದಂಬ ಬಾಹುಗಳಿಂದ ಎಲ್ಲರನ್ನೂ ತನ್ನೆಡೆಗೆ ಎಳೆದುಕೊಂಡು ಹೋಗುತ್ತಿದೆ.
ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ವೈಯಕ್ತಿಕವಾಗಿಯೂ ಕೂಡ ಬಹುವಿಧದಲ್ಲಿ ಹಾನಿಯನ್ನುಂಟು ಮಾಡುವ ಈ ರೀಲ್ಸ್ನ್ನು ನಿರ್ಬಂಧಿಸಲು ನಾವು ದೃಢ ನಿರ್ಧಾರ ಮಾಡಿದಾಗ ಮಾತ್ರ ನೆಮ್ಮದಿ ಮತ್ತು ಯಶಸ್ಸು ಸಿಗಲು ಸಾಧ್ಯ. ಇದರಿಂದಾಗಿ ಜನರು ದುಡಿಯದೇ ಹಣ ಗಳಿಸುವ ವಾಮಮಾರ್ಗಗಳನ್ನು ಹುಡುಕುತ್ತಿರುವುದು ಕೂಡ ಆತಂಕಕಾರಿ ಬೆಳವಣಿಗೆಯಾಗಿದೆ. ನಮ್ಮಲ್ಲಿ ಯಾವುದೇ ವಿದ್ಯೆ ಅಥವಾ ಸಾಮರ್ಥ್ಯ ಇಲ್ಲ ಎಂದಾಗ ಹಣ ಗಳಿಸಲು ಸಾಧ್ಯವೇ ಇಲ್ಲ. ಅಂಥವರಿಗೆ ಯಾರೂ, ಯಾವ ನೌಕರಿಯನ್ನು ಕೊಡಲಾರರು. ಇದರಿಂದಾಗಿ ಅವರು ದುಷ್ಕೃತ್ಯಗಳ ಮೂಲಕ ಹಣ ಗಳಿಸಲು ಹೋಗಿ ಕೊಲೆ, ಸುಲಿಗೆ, ದರೋಡೆಗಳಂತಹ ನೀಚ ಕೆಲಸಗಳನ್ನು ಮಾಡುತ್ತಾ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಾರೆ.
ಹೀಗಾಗಿ ಮೊಬೈಲ್ನ ಬಳಕೆಯಿಂದಾಗಿ ಜನ ಮತ್ತು ಜಗತ್ತು ಎತ್ತ ಸಾಗುತ್ತಿದೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ. ಮೊಬೈಲ್ನ ಸದುಪಯೋಗ ಪಡಿಸಿಕೊಂಡು ಅದನ್ನು ಜ್ಞಾನಾರ್ಜನೆಗೆ ವಿನಿಯೋಗಿಸಿದಾಗ ಮಾತ್ರ ಅದರ ಆವಿಷ್ಕಾರ ಸಾರ್ಥಕತೆ ಪಡೆಯುತ್ತದೆ. ಬೆಳಗ್ಗೆದ್ದು ಶೇ. 85ರಷ್ಟು ಜನ ಮೊದಲು ನೋಡುವ ವಸ್ತು ಎಂದರೆ ಅದು ಮೊಬೈಲ್, ಅದರಲ್ಲೂ ರೀಲ್ಸ್ ಎಂಬ ಮಾಯಾವಿಯ ಆಕರ್ಷಕ ಹೊಡೆತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಪ್ರತೀದಿನ ದುಪ್ಪಟ್ಟಾಗುತ್ತಿದೆ. ಹೀಗೆ ಈ ರೀಲ್ಸ್ ಎಂಬ ರೈಲಿನಲ್ಲಿ ಕುಳಿತು ಸದಾಕಾಲವೂ ಪ್ರಯಾಣ ಮಾಡುತ್ತಾ ಹೋದರೆ ನಾವು ಅಂದುಕೊಂಡ ಸಾಧನೆಯ ಎಂಬ ನಿಲ್ದಾಣವನ್ನು ತಲುಪಲಾಗುವುದಿಲ್ಲ. ಆದ್ದರಿಂದ ನಾವು ನಮ್ಮ ಕೆಲಸ-ಕಾರ್ಯಗಳ ಬಗ್ಗೆ ಗಮನಹರಿಸಿ ಅಂದುಕೊಂಡದ್ದನ್ನು ಸಾಧಿಸಬೇಕೆಂದರೆ ಈ ರೀಲ್ಸ್ ಎಂಬ ರಗಳೆಯ ಗೊಡವೆಗೆ ಹೋಗಲೇಬಾರದು. ರೀಲ್ಸ್ ನ ರಿಯಲ್ ರಗಳೆಗಳು…
ಶ್ರೀನಿವಾಸ ಎನ್. ದೇಸಾಯಿ ಕುಷ್ಟಗಿ