Advertisement

ಬೇಗೂರಲ್ಲಿ ಕುಡಿವ ನೀರಿಗೆ ಹಾಹಾಕಾರ

10:18 PM Apr 29, 2019 | Lakshmi GovindaRaju |

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಾಂಡವವಾಗುತ್ತಿದೆ. ಗ್ರಾಮಸ್ಥರು ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಬಿನಿ ಕುಡಿಯುವ ನೀರು ಸರಬರಾಜಿನ ಬಗ್ಗೆ ಕಳೆದ 15 ದಿನಗಳಿಂದ ಬೇಗೂರು ಸೇರಿದಂತೆ ಸುತ್ತ ಮುತ್ತಲ ಐದಾರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜಾಗಾದೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಜನತೆಗೆ ಬಿಸಿ ತಟ್ಟಿದೆ.

Advertisement

ಅಧಿಕಾರಿಗಳಿಗೆ ಹಿಡಿಶಾಪ: ಗುಂಡ್ಲುಪೇಟೆ ತಾಲೂಕಿನಲ್ಲಿ ಬೇಗೂರು ಹೋಬಳಿ ಅತ್ಯಂತ ದೊಡ್ಡ ಹೋಬಳಿ ಕೇಂದ್ರವಾಗಿದೆ. ಆದರೂ ಇಲ್ಲಿನ ಜನರು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೂ, ಖಾಲಿ ಕೊಡ ಹಿಡಿದು ಅಲೆದಾಡುತ್ತಿದ್ದರೂ, ನೀರಿನ ಸಮಸ್ಯೆ ಬಗ್ಗೆ ಯಾವೊಬ್ಬ ಅಧಿಕಾರಿಗಳೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಾರೆ.

ಕಬಿನಿ ನೀರನ್ನೇ ನಂಬಿರುವ 33 ಗ್ರಾಮಗಳು: ನಂಜನಗೂಡಿನಿಂದ ಗುಂಡ್ಲುಪೇಟೆ ತಾಲೂಕಿಗೆ ಕಬಿನಿ ಕುಡಿಯುವ ನೀರಿನ ಪೈಪ್‌ಲೈನ್‌ ಹಾದುಹೋಗಿದ್ದು, ಪೈಪ್‌ಲೈನ್‌ ಪಕ್ಕದ ಹಲವಾರು ಗ್ರಾಮಗಳು ಈ ನೀರಿನ ಸೌಲಭ್ಯ ಪಡೆದುಕೊಂಡಿವೆ, ಬೇಗೂರು ಹೋಬಳಿ ಚಿಕ್ಕಾಟಿ, ಹಾಲಹಳ್ಳಿ, ತೊಂಡವಾಡಿ, ರಾಘವಾಪುರ, ತಗ್ಗಲೂರು, ಗರಗನಹಳ್ಳಿ, ಸೇರಿದಂತೆ 33ಕ್ಕೂ ಹೆಚ್ಚು ಹಳ್ಳಿಗಳ ಜನರು ಕಬಿನಿ ಕುಡಿಯುವ ನೀರನ್ನೇ ಅವಲಂಬಿಸಿದ್ದಾರೆ.

ಹನಿ ನೀರಿಗೂ ಪರದಾಟ: ಕಬಿನಿ ಕುಡಿಯುವ ನೀರು ಸರಬರಾಜಿನ ಮೋಟರ್‌ಗಳು ಸುಟ್ಟು ಹೋಗಿವೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆದರೆ ಕಾರಣ ಬೇರೆಯೇ ಇದೆ, ಅಲ್ಲದೇ ಸುಟ್ಟು ಹೋಗಿರುವ ಮೋಟಾರ್‌ ದುರಸ್ತಿಗೆ ಎಷ್ಟು ದಿನಗಳು ಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಕಳೆದ 15 ದಿನಗಳಿಂದ ಬೇಗೂರು ಹೋಬಳಿ ಸುತ್ತ ಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನ ಬೇಸತ್ತಿದ್ದು, ಗ್ರಾಮಸ್ಥರು ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೋರ್‌ವೆಲ್‌ ಕೊರೆಸದ ಗ್ರಾಪಂ: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಇದೇ ಮೊದಲೇನಲ್ಲ. ಈ ಸಮಸ್ಯೆ ಆಗಿಂದಾಗ್ಗೆ ತಲೆ ತೋರುತ್ತಲೇ ಇದ್ದರೂ, ಚುನಾಯಿತ ಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಶಾಶ್ವತವಾಗಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಕ್ರಮ ಕೈಗೊಂಡಿಲ್ಲ. ಲಕ್ಷಾಂತರ ರೂ. ಆದಾಯವಿರುವ ಗ್ರಾಪಂ ಆಡಳಿತ ಮಂಡಳಿ ಜನರ ನೀರಿನ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಕೇವಲ ಕಬಿನಿ ನೀರಿನ ಸರಬರಾಜನ್ನೆ ನೆಚ್ಚಿಕೊಂಡಿರುವ ಅಧಿಕಾರಿಗಳು ಹೊಸದಾಗಿ ಬೋರ್‌ವೆಲ್‌ ಕೊರೆಯಿಸಿ ಸಮರ್ಪಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿಲ್ಲ.

Advertisement

ಇರುವುದೆರೆಡೆ ರಾಟೆ ಬಾವಿ: ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಎರಡು ರಾಟೆ ಬಾವಿಗಳನ್ನು ಆಶ್ರಯಿಸುವಂತಾಗಿದೆ. ಬಾವಿಯಲ್ಲಿನ ನೀರನ್ನೆ ಗ್ರಾಮದ ಜನರು ನೆಚ್ಚಿಕೊಂಡಿದ್ದಾರೆ. ಕಬಿನಿ ಜಲಾಶಯದಿಂದ ನಂಜನಗೂಡಿನಿಂದ ಗುಂಡ್ಲುಪೇಟೆಗೆ ಕಬಿನಿ ನೀರು ಸರಬರಾಜಾಗುತ್ತಿದ್ದು, ಈ ಭಾಗದಲ್ಲಿ ಬರುವ ಸುತ್ತ-ಮುತ್ತಲ ಹಳ್ಳಿಗಳಿಗೂ ಸಹ ಇದೇ ನೀರು ಪೂರೈಕೆಯಾಗುತ್ತಿದೆ. ಆದರೆ ಈ ಪೈಪ್‌ಲೈನ್‌ ಮಾಡಿ ಅನೇಕ ವರ್ಷಗಳಾಗಿರುವುದರಿಂದ ಪೈಪ್‌ಗ್ಳೆಲ್ಲಾ ಹಳೆದಾದ್ದು ಆಗಾಗ ಒಡೆದು ಹೋಗುತ್ತಿರುತ್ತವೆ.

ಹೊಸ ಬೋರ್‌ ಕೊರೆಸಲು ಗ್ರಾಮಸ್ಥರ ಆಗ್ರಹ: ಪ್ರಸ್ತುತ ನೀರು ಸರಬರಾಜಿನ ಮೋಟರ್‌ಗಳು ಸುಟ್ಟು ಹೋಗಿ 15 ದಿನಗಳೇ ಕಳೆದಿದ್ದರೂ ಶೀಘ್ರ ದುರಸ್ತಿಯಾಗದ ಹಿನ್ನೆಲೆ ಗ್ರಾಮಸ್ಥರು ನೀರಿಲ್ಲದೆ ಪರದಾಡುವಂತಾಗಿದೆ. ಇನ್ನೂ ಬೇಸಿಗೆ ಪ್ರಾರಂಭವಾಗಿಲ್ಲ, ಈಗಲೇ ಕುಡಿಯುವ ನೀರಿಗೆ ಈ ರೀತಿಯ ಬರ ಬಂದಿದೆ.

ಬೇಸಿಗೆ ದಿನಗಳಲ್ಲಿ ಗ್ರಾಮಸ್ಥರು ನೀರಿಗಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಗ್ರಾ.ಪಂ ಆಡಳಿತ ವರ್ಗದವರು ಮತ್ತು ಚುನಾಯಿತ ಪ್ರತಿನಿಧಿಗಳು ಕುಡಿಯುವ ನೀರಿಗೆ ಕಬಿನಿ ಮೂಲವನ್ನೇ ಆಶ್ರಯಿಸದೇ ಕಬಿನಿಯಲ್ಲಿ ದುರಸ್ತಿಯಾದಾಗ ನೀರಿನ ಸರಬರಾಜಿನಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಹೊಸ ಬೋರ್‌ ಕೊರೆಯಿಸಿ ನೀರು ಸರಭರಾಜು ಮಾಡಲಿ ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next