Advertisement

ಬಸ್‌ ನಿಲುಗಡೆ ಸಮಸ್ಯೆ ಇತ್ಯರ್ಥ

05:29 PM Mar 13, 2022 | Team Udayavani |

ಬಂಕಾಪುರ: ರಾಷ್ಟ್ರೀಯ ಹೆದ್ದಾರಿ 4ರ ತಂಬಾಕದ ಮನೆ ಬಳಿ ಎಲ್ಲ ಸಾರಿಗೆ ಸಂಸ್ಥೆಗಳ ಬಸ್‌ಗಳನ್ನು ನಿಲುಗಡೆಗೊಳಿಸಬೇಕೆಂದು ಆಗ್ರಹಿಸಿ ಹೋರಾಟಕ್ಕೆ ಅಣಿಯಾಗುತ್ತಿದ್ದ ಗ್ರಾಮಸ್ಥರು ಹಾಗೂ ಸಾರಿಗೆ ಸಂಸ್ಥೆ ಅಧಿಕಾರಿಗಳ ಸಭೆ ನಡೆಸಿದ ಪಿಎಸ್‌ಐ ಪರಶುರಾಮ ಕಟ್ಟಿಮನಿ ಅವರು, ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಪಡಿಸಿದರು.

Advertisement

ಬಂಕಾಪುರ ಪಟ್ಟಣ 30 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹಾಗೂ ಸುಮಾರು 60 ಹಳ್ಳಿಗಳ ನಿಕಟ ಸಂಪರ್ಕ ಹೊಂದಿದೆ. ಪಟ್ಟಣದಲ್ಲಿ ಡಿಪ್ಲೋಮಾ ಕಾಲೇಜು, ಪ್ರಥಮ ದರ್ಜೆ ಮಹಾವಿದ್ಯಾಲಯ, ಪದವಿ ಪೂರ್ವ ಕಾಲೇಜು, ಐಟಿಐ ಸೇರಿದಂತೆ ಹಲವಾರು ಪ್ರೌಢಶಾಲೆಗಳಿವೆ. ಉಪ ತಹಶೀಲ್ದಾರ್‌ ಕಚೇರಿ, ಕೃಷಿ ಕೇಂದ್ರ, ಪುರಸಭೆಯನ್ನು ಹೋಂದಿದೆ. ಅದಲ್ಲದೇ, ಬಹುದೊಡ್ಡ ವ್ಯಾಪಾರ ಕೇಂದ್ರವೂ ಆಗಿರುವುದರಿಂದ ಪ್ರತಿ ದಿನ ಸಾವಿರಾರು ಸಂಖ್ಯೆಯ ಜನ ದಿನದ 24 ಗಂಟೆಗಳ ಕಾಲ ಸಂಚರಿಸುತ್ತಾರೆ. ಜನರ ಅನಕೂಲಕ್ಕಾಗಿ ಎಲ್ಲ ಸಾರಿಗೆ ಸಂಸ್ಥೆಗಳ ಬಸ್‌ಗಳು ಎನ್‌.ಎಚ್‌. 4ರ ತಂಬಾಕದ ಮನೆಯ ಸರ್ವೀಸ್‌ ರಸ್ತೆಯಲ್ಲಿ ನಿಲುಗಡೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಾ ಬಂದಿದ್ದರು.

ಇದಕ್ಕೆ ಸಮ್ಮತಿಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳು, ಎಲ್ಲ ಬಸ್‌ಗಳು ತಂಬಾಕದ ಮನೆ ಹತ್ತಿರ ನಿಂತು ಹೋಗಲು ಆದೇಶ ಮಾಡಿದ್ದರು. ಆದರೆ, ಬಸ್‌ ಗಳು ನಿಲುಗಡೆಯಾಗದೆ ಮೇಲ್ಸೇತುವೆ ಮೇಲೆ ಹಾದು ಹೋಗುತ್ತಿರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದರು. ಆಗ ಸ್ಥಳೀಯ ಪಿಎಸ್‌ಐ ಪರಶುರಾಮ ಕಟ್ಟಿಮನಿ ಅವರು ಸಂಧಾನ ಸಭೆ ನಡೆಸಿದರು.

ಸಭೆಯಲ್ಲಿ ಹಾವೇರಿ ಸಾರಿಗೆ ಇಲಾಖೆ ಅಧಿಕಾರಿ ಆಶೀಕ್‌ ಪಾಟೀಲ ಅವರು ಮಾ. 15 ರಿಂದ ನಾನ್‌ಸ್ಟಾಪ್‌ ಹಾಗೂ ಲಗ್ಝರಿ ಬಸ್‌ ಗಳನ್ನು ಹೊರತುಪಡಿಸಿ ಉಳಿದ ಎಲ್ಲ ಬಸ್‌ ಗಳು ತಾಂಬಾಕದ ಮನೆ ಹತ್ತಿರ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು. ದಿನದ 24 ಗಂಟೆಗಳ ಕಾಲ ಸಾರಿಗೆ ನಿಯಂತ್ರಕರನ್ನು ನಿಯೋಜಿಸಿ ಕಡ್ಡಾಯವಾಗಿ ಎಲ್ಲ ಬಸ್‌ ಗಳು ನೋಂದಣಿಯಾಗಿ ಸಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಸಾರಿಗೆ ಸಹಾಯಕ ವ್ಯವಸ್ಥಾಪಕ ಬಾಪುಗೌಡ ಪಾಟೀಲ, ಸಾರಿಗೆ ನಿಯಂತ್ರಕ ಬಾಪು ತಳ್ಳಳ್ಳಿ, ಮುಖಂಡರಾದ ಹುಚ್ಚಯ್ಯಸ್ವಾಮಿ ಹುಚ್ಚಯ್ಯನಮಠ, ರಾಮಣ್ಣ ರಾಣೋಜಿ, ಸತೀಷ ಆಲದಕಟ್ಟಿ, ಸುರೇಶ ಕುರಗೋಡಿ, ಯಲ್ಲಪ್ಪ ಸುಂಕದ, ರಮೇಶ ಸಿದ್ದುನವರ, ಬಸವರಾಜ ನಾರಾಯಣಪುರ, ಎಮ್‌.ಎಸ್‌.ನರೇಗಲ್‌, ಕಲ್ಲಪ್ಪ ಹರವಿ, ನೀಲಪ್ಪ ಕುರಿ, ಗಿರಿರಾಜ ದೇಸಾಯಿ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next