ಜೀವನ ನಾವು ಕನಸು ಕಾಣುವಷ್ಟು ಸುಲಭವೂ ಅಲ್ಲ. ಹಾಗೆಂದು ಬದುಕಿನಲ್ಲಿ ಕೇವಲ ಕಷ್ಟ ಕೋಟಲೆಗಳೇ ತುಂಬಿರುತ್ತವೆ ಎಂಬ ಅನಿಸಿಕೆಯೂ ತಪ್ಪು. ಕೆಲವೊಮ್ಮೆ ಇನ್ನು ಬದುಕುವುದಕ್ಕೆ ಸಾಧ್ಯವೇ ಇಲ್ಲ ಎನ್ನಿಸಿಬಿಡುವಷ್ಟರ ಮಟ್ಟಿಗೆ ನಮ್ಮನ್ನು ಹೈರಾಣಾಗಿಸಿ ಬಿಟ್ಟರೂ, ಕೊನೆ ಗಳಿಗೆಯಲ್ಲಿ ಯಾವುದೋ ಒಂದು ಸಣ್ಣ ಹಾದಿ ಮತ್ತೆ ನಮ್ಮನ್ನು ಉಸಿರಾಡುವಂತೆ ಮಾಡುತ್ತದೆ. ಅಬ್ಟಾ ಅನ್ನಿಸಿಬಿಡುತ್ತದೆ. ಬದುಕನ್ನು ಅರ್ಥೈಸಿಕೊಳ್ಳುವುದು ಕಷ್ಟವಾದರೂ ಸಮಸ್ಯೆಗಳನ್ನು ಸಾಮಾನ್ಯ ಎಂದು ಗ್ರಹಿಸಿದಲ್ಲಿ ಕೊಂಚ ಮಟ್ಟಿನ ನೆಮ್ಮದಿ ಸಾಧ್ಯ ಎಂಬುದಕ್ಕೆ ಇಲ್ಲಿದೆ ತಂದೆ, ಪುತ್ರಿ ಒಂದು ಪುಟ್ಟ ಕಥೆ.
ಒಂದು ಬಾರಿ ಪುತ್ರಿ ತನ್ನ ತಂದೆಯ ಬಳಿ ಹೋಗಿ, ‘ಅಪ್ಪಾ, ನನಗಿನ್ನು ಬದುಕುವ ಯಾವ ಆಕಾಂಕ್ಷೆಯೂ ಉಳಿದಿಲ್ಲ. ಸಮಸ್ಯೆಗಳು ಬಿಟ್ಟರೆ ಒಂದಿನಿತೂ ನೆಮ್ಮದಿ ಎನ್ನುವುದಿಲ್ಲ. ಇದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಜೀವನವೇ ಸಾಕು ಎನ್ನಿಸಿಬಿಟ್ಟಿದೆ’ ಎಂದು ದುಃಖವನ್ನು ತೋಡಿಕೊಳ್ಳುತ್ತಾಳೆ. ಅದಕ್ಕೆ ನಗುತ್ತಾ ಉತ್ತರಿಸಿದ ತಂದೆ, ಒಂದು ಚಿಕ್ಕ ಪ್ರಯೋಗದ ಮೂಲಕ ಅವಳಲ್ಲಿ ಧೈರ್ಯ ತುಂಬುತ್ತಾರೆ.
ಅಡುಗೆಕೋಣೆಗೆ ಕರೆದುಕೊಂಡು ಹೋಗಿ ಮೂರು ಒಲೆಗಳಲ್ಲಿ ಮೊಟ್ಟೆ, ಆಲೂಗಡ್ಡೆ ಮತ್ತು ಕಾಫಿ ಬೀಜಗಳನ್ನು ಬೇಯಿಸಲು ಇಡುತ್ತಾರೆೆ. ಅವುಗಳು ಬೆಂಕಿಯ ಜ್ವಾಲೆಗೆ ನೀರಿನಲ್ಲಿ ಬೆಂದು ತಮ್ಮ ಮೂಲಗುಣದಿಂದ ಇನ್ನೊಂದು ಗುಣಕ್ಕೆ ಬದಲಾಗಿರುತ್ತವೆ. ಈ ಕ್ರಿಯೆಯನ್ನು ಸಂಪೂರ್ಣವಾಗಿ ಗಮನಿಸಿದ ಪುತ್ರಿಯ ಬಳಿ,’ಇದರಿಂದ ಏನು ಅರ್ಥವಾಯಿತು” ಎಂದು ಕೇಳುತ್ತಾರೆ. ಅದಕ್ಕೆ ಮಗಳು ತಲೆ ಅಲ್ಲಾಡಿಸಿ ಏನೂ ಇಲ್ಲ ಎಂದು ತಿಳಿಸುತ್ತಾಳೆ. ಆಗ ತಂದೆ ನಕ್ಕು, ಆಲೂಗಡ್ಡೆ ಮೂಲತಃ ಗಟ್ಟಿಯಾಗಿದ್ದರೂ ಬೆಂದ ಪರಿಣಾಮ ಮೃದುವಾಗುತ್ತದೆ. ಹಾಗೆಯೇ ಮೊಟ್ಟೆ, ಮೂಲ ರೂಪದಲ್ಲಿ ದ್ರವವಾಗಿದ್ದರೂ ಬೆಂದ ಪರಿಣಾಮ ಗಟ್ಟಿಗೊಳ್ಳುತ್ತದೆ. ಕಾಫಿ ಬೀಜ ಮೂಲ ರೂಪದಲ್ಲಿ ಗಟ್ಟಿಯಾಗಿತ್ತು. ಅದು ನೀರಿನೊಂದಿಗೆ ಬೆರೆತು ಕಾಫಿಯಾಗಿ ಮಾರ್ಪಟ್ಟು ಹೊಸ ರುಚಿ, ಸುಗಂಧವನ್ನು ನೀಡುತ್ತದೆ. ಹಾಗೆಯೇ ಮನುಷ್ಯರೂ ಮೃದುವಾಗುತ್ತೇವೋ, ಗಟ್ಟಿಯಾಗುತ್ತೇವೋ ಅಥವಾ ಎಲ್ಲಕ್ಕೂ ಪರಿಹಾರ ಕಂಡುಕೊಂಡು ಇತರರಿಗೂ ಮಾದರಿಯಾಗಬಯಸುತ್ತೇವೆಯೋ ಎನ್ನುವುದನ್ನು ನಾವು ನಿರ್ಧರಿಸಬೇಕು. ಅದರ ಹೊರತಾಗಿ ಬದುಕು ಮುಗಿಯಿತು ಎಂದುಕೊಳ್ಳುವುದು ತಪ್ಪು ಎಂದು ಪುತ್ರಿಗೆ ಅರ್ಥ ಮಾಡಿಸುತ್ತಾರೆೆ.
ಇಲ್ಲಿ ಮೊಟ್ಟೆ ಗಟ್ಟಿಗೊಂಡು ಪರಿಸ್ಥಿತಿಯನ್ನು ನಿಭಾಯಿಸುವವರನ್ನು ಸೂಚಿಸಿದರೆ, ಆಲೂಗಡ್ಡೆ ಸಮಸ್ಯೆಯ ಕಾರಣದಿಂದ ಮತ್ತಷ್ಟು ಮೃದುಗೊಂಡವರ ಸಂಕೇತವಾಗಿದೆ. ಆದರೆ ಕಾಫಿ ಮಾತ್ರ ಸಮಸ್ಯೆಗಳ ನಡುವೆಯೂ, ಎಲ್ಲ ಸವಾಲುಗಳನ್ನು ಮೀರಿ ಹೊಸ ಬಣ್ಣ, ರುಚಿ ಮತ್ತು ಪರಿಮಳ ಅಂದರೆ ಸಮಸ್ಯೆಗಳಿಂದ ಸಂಪೂರ್ಣವಾಗಿ ಹೊರಬಂದು ಇತರರ ಬಾಳಿಗೂ ದಾರಿ ತೋರಿಸುವವರ ಸೂಚಕವಾಗಿದೆ. ಇವೆಲ್ಲದರ ಹಿಂದೆಯೂ ಬೆಂಕಿ ಮತ್ತು ನೀರು ಎಂಬ ಸಾಮಾನ್ಯ ವಿಚಾರವೇ ಇದ್ದರೂ ಇವುಗಳ ಮೇಲೆ ಬೀರಿದ ಪರಿಣಾಮ ಮಾತ್ರ ಬೇರೆ ಬೇರೆ. ಈ ಮೇಲಿನ ಮೂರರಲ್ಲಿ ನಾವೇನಾಗುತ್ತೇವೆ ಎಂಬುದು ನಮ್ಮ ಆಲೋಚನೆ ಮತ್ತು ವಿವೇಚನೆಗಳಿಗೆ ಬಿಟ್ಟದ್ದು.
ಸಮಸ್ಯೆಎಲ್ಲರಿಗೂ ಸಾಮಾನ್ಯ. ಸಮಸ್ಯೆಯ ರೂಪಗಳು ಮಾತ್ರ ಬೇರೆಯಾಗಿರುತ್ತದೆಯೇ ಹೊರತು, ಸಮಸ್ಯೆಯೇ ಇಲ್ಲದ ವ್ಯಕ್ತಿಗಳಿರಲು ಸಾಧ್ಯವೇ ಇಲ್ಲ. ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕೇ ಹೊರತು, ಅಳುತ್ತಾ ಕೂತರೆ ಸಮಸ್ಯೆಗಳು ಸರಮಾಲೆಯಾಗುತ್ತದೆ. ಹಾಗಾಗಿ ಆರಂಭದಲ್ಲಿಯೇ ಸಮಸ್ಯೆಯನ್ನು ಜಯಿಸುವ ಬಗ್ಗೆ ಯೋಚಿಸಿದರೆ ಉತ್ತಮ.
ಭುವನ ಬಾಬು ಪುತ್ತೂರು