Advertisement
ಪಾಟ್ನಾ-ದಿಲ್ಲಿ ಲೀಗ್ ಹಂತದ ನಂ.1 ಮತ್ತು ನಂ.2 ತಂಡಗಳೆಂಬುದು ವಿಶೇಷ. ಈ ಕಾರಣದಿಂದ ಫೈನಲ್ ಹಣಾಹಣಿ ತೀವ್ರ ಪೈಪೋಟಿಯಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ.
Related Articles
Advertisement
2016ರಲ್ಲಿ ಎರಡು ಪ್ರೊ ಕಬಡ್ಡಿ ಆವೃತ್ತಿಗಳು ನಡೆದಿದ್ದವು. ಎರಡರಲ್ಲೂ ಪಾಟ್ನಾವೇ ಪರಾಕ್ರಮ ಮೆರೆದಿತ್ತು. ಜನವರಿ ಆವೃತ್ತಿಯ ಫೈನಲ್‌ನಲ್ಲಿ ಯು ಮುಂಬಾವನ್ನು ಮಣಿಸಿ ಮೊದಲ ಸಲ ಕಿರೀಟ ಏರಿಸಿಕೊಂಡಿತು. ಜುಲೈ ಆವೃತ್ತಿಯ ಪ್ರಶಸ್ತಿ ಸಮರದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಗೆ ಸೋಲುಣಿಸಿ ಕಿರೀಟ ಉಳಿಸಿಕೊಂಡಿತು. ಒಂದೇ ವರ್ಷದಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪಾಟ್ನಾ, 2017ರಲ್ಲಿಯೂ ಗೆದ್ದು ಹ್ಯಾಟ್ರಿಕ್ ಸಾಧನೆ ಮೆರೆಯಿತು. ಅಂದು ಪಾಟ್ನಾಕ್ಕೆ ಶರಣಾದ ತಂಡ ಗುಜರಾತ್ ಫಾರ್ಚೂನ್ ಜೈಂಟ್ಸ್. ಇದೀಗ ಪಾಟ್ನಾ ಮತ್ತೆ ಫೈನಲ್ ಪ್ರವೇಶಿಸಿದೆ. ತಂಡದ ಅಜೇಯ ಓಟ ಮುಂದುವರಿದೀತೇ ಎಂಬ ಕೌತುಕ ಅಭಿಮಾನಿಗಳದ್ದು.
ದಿಲ್ಲಿಗೆ ನವೀನ್ ಆಸರೆ :
ಪಾಟ್ನಾ ತಂಡದಂತೆ ದಿಲ್ಲಿಯಲ್ಲಿ ಆಲ್‌ರೌಂಡರ್ ಆಟಗಾರರಿಲ್ಲ. ಪ್ರಮುಖ ರೈಡರ್ ನವೀನ್ ಕುಮಾರ್ ಅಂಕಣದಿಂದ ಹೊರಗುಳಿದರೆ ಚಾಕಚಕ್ಯತೆಯಿಂದ ಅಂಕ ಗಳಿಸುವಂತಹ ಸಮರ್ಥ ರೈಡರ್ ಕೊರತೆ ದಿಲ್ಲಿ ಯನ್ನು ಕಾಡುತ್ತಿದೆ.
ಲೀಗ್ ಹಂತದ ಆರಂಭಿಕ ಪಂದ್ಯಗಳಲ್ಲಿ ಮಿಂಚಿದ್ದ ನವೀನ್, ಬಳಿಕ ಮೊಣಕಾಲಿನ ಗಾಯದಿಂದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ಚೇತರಿಸಿಕೊಂಡು ತಂಡಕ್ಕೆ ಮರಳಿದರೂ ಪದೇಪದೆ ನೋವು ಕಾಣಿಸಿ ಕೊಳ್ಳುತ್ತಿರುವ ಕಾರಣ ಅವರಲ್ಲಿ ಹಿಂದಿನ ರೈಡಿಂಗ್ ಚಾರ್ಮ್ ಕಂಡುಬರುತ್ತಿಲ್ಲ. ಬುಲ್ಸ್ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ 14 ಅಂಕ ಗಳಿಸಿದರೂ ಹಲವು ಬಾರಿ ನೋವಿನಿಂದ ಕುಂಟುತ್ತ ಸಾಗಿದ್ದನ್ನು ಗಮನಿಸಿರಬಹುದು.
ಒಂದೊಮ್ಮೆ ಫೈನಲ್‌ನಲ್ಲಿಯೂ ನವೀನ್‌ಗೆ ಗಾಯದ ಸಮಸ್ಯೆ ಕಂಡುಬಂದರೆ ದಿಲ್ಲಿಗೆ ಗಂಡಾಂತರ ತಪ್ಪಿದ್ದಲ್ಲ. ದಿಲ್ಲಿಯ ಡಿಫೆಂಡಿಂಗ್ ವಿಭಾಗದಲ್ಲಿ ಅನುಭವಿ ಆಟಗಾರರಿದ್ದರೂ ಅವರಿಂದ ನಿರೀಕ್ಷಿತ ಆಟ ಕಂಡುಬಂದಿಲ್ಲ.
ಕರಾವಳಿಗೆ ಹೆಮ್ಮೆ :
ಪಾಟ್ನಾ ತಂಡವನ್ನು ಮುನ್ನಡೆಸುತ್ತಿರುವ “ಕೂಲ್ ಕ್ಯಾಪ್ಟನ್’ ಖ್ಯಾತಿಯ ಪ್ರಶಾಂತ್ ಕುಮಾರ್ ರೈ ದಕ್ಷಿಣ ಕನ್ನಡದ ಪುತ್ತೂರಿನವರು. ಹೀಗಾಗಿ ಪಾಟ್ನಾ ತಂಡಕ್ಕೆ ಕರಾವಳಿಯಲ್ಲಿಯೂ ಹೆಚ್ಚಿನ ಅಭಿಮಾನಿಗಳಿದ್ದಾರೆ. ಇದೇ ಮೊದಲ ಬಾರಿ ಪಾಟ್ನಾವನ್ನು ಮುನ್ನಡೆಸಿದ ಪ್ರಶಾಂತ್ ನಾಯಕತ್ವದಲ್ಲಿ ತಂಡ ಚಾಂಪಿಯನ್ ಆಗಿ ಮೂಡಿಬಂದರೆ ಪಾಟ್ನಾ ಜತೆಗೆ ಕರಾವಳಿಗೂ ಕೋಡು ಮೂಡಲಿದೆ! ಆತಿಥೇಯ ಬೆಂಗಳೂರು ಬುಲ್ಸ್ ಸೆಮಿಫೈನಲ್‌ನಲ್ಲಿ ಹೊರಬಿದ್ದ ಕಾರಣ ಪ್ರಶಾಂತ್ ರೈ ತಂಡಕ್ಕೆ ಕರ್ನಾಟಕದ ಕಬಡ್ಡಿ ಅಭಿಮಾನಿಗಳ ಬೆಂಬಲ ಹಾಗೂ ಗೆಲುವಿನ ಹಾರೈಕೆಯೂ ಇರಲಿದೆ.