ಪ್ರಿಯಾಂಕಾ ಉಪೇಂದ್ರ ಅಭಿನಯದ “ಮಿಸ್ ನಂದಿನಿ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ “ಮಿಸ್ ನಂದಿನಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆಯ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್, ನಟಿ ಶೀತಲ್ ಶೆಟ್ಟಿ ಮೊದಲಾದ ಗಣ್ಯರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಯಿತು.
“ಶ್ರೀ ವಿಜಯ್ ಫಿಲಂಸ್’ ಬ್ಯಾನರ್‌ನಲ್ಲಿ ನೀಲಕಂಠ ಸ್ವಾಮಿ ಕೆ. ಪಿ ನಿರ್ಮಿಸಿರುವ “ಮಿಸ್ ನಂದಿನಿ’ ಚಿತ್ರಕ್ಕೆ ಗುರುದತ್ ಎಸ್. ಆರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ಭವ್ಯಾ, ಡ್ಯಾನಿ ಕುಟ್ಟಪ್ಪ, ಶ್ರೀಧರ್, ಅಪ್ಪಣ್ಣ, ರಘು ಪಾಂಡೇಶ್ವರ, ಲಕ್ಷ್ಮೀ ಸಿದ್ದಯ್ಯ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದೇ ವೇಳೆ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ, “ಮೊದಲ ಬಾರಿಗೆ ಈ ಸಿನಿಮಾದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದೇನೆ. ಇಂತಹ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿರುವ ಚಿತ್ರತಂಡಕ್ಕೆ ಧನ್ಯವಾದಗಳು. ಕನ್ನಡ ತುಂಬ ಸ್ಪಷ್ಟವಾಗಿ ಮಾತನಾಡಲು ಬಾರದಿದ್ದರೂ ನಿರ್ದೇಶಕರು ಸೆಟ್‌ನಲ್ಲಿ ಹೇಳಿ ಕೊಡುತ್ತಿದ್ದರು. ಸಿನಿಮಾದ ಬಹುಭಾಗವನ್ನು ಸರ್ಕಾರಿ ಶಾಲೆಯಲ್ಲೇ ಚಿತ್ರೀಕರಿಸಲಾಗಿದೆ. ಒಳ್ಳೆಯ ಕಥೆ, ನಮ್ಮ ನಡುವಿನ ಸಬ್ಜೆಕ್ಟ್ ಇದರಲ್ಲಿದೆ’ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಗುರುದತ್ ಎಸ್. ಆರ್ “ಎಲ್ಲಾ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಬೇಕೆಂದು ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಖಾಸಗಿ ಶಾಲೆಯಲ್ಲಿ ಇದ್ದಂತ ಗುಣಮಟ್ಟವು ಸರ್ಕಾರಿ ಶಾಲೆಯಲ್ಲಿ ಇರಬೇಕೆಂದು ಹೇಳಲಾಗಿದೆ. ಇದಕ್ಕೆ ಸರ್ಕಾರವು ಯಾವ ರೀತಿ ಸ್ಪಂದಿಸುತ್ತದೆ ಎನ್ನುವುದೇ ಸಿನಿಮಾದ ಸಾರಾಂಶ. ಕಾರವಾರ, ಬಾಗಲಕೋಟೆ, ಬೆಂಗಳೂರು ಕಡೆಗಳಲ್ಲಿ ಶೂಟಿಂಗ್ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.
“ಮಿಸ್ ನಂದಿನಿ’ ಚಿತ್ರಕ್ಕೆ ವೀನಸ್ ನಾಗರಾಜಮೂರ್ತಿ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಸಾಯಿ ಸರ್ವೇಶ್ ಸಾಹಿತ್ಯ, ಸಂಗೀತವಿದೆ. ಸದ್ಯ ಹಾಡುಗಳು ಮತ್ತು ಟ್ರೇಲರ್ ಮೂಲಕ ಹೊರಬಂದಿರುವ “ಮಿಸ್ ನಂದಿನಿ’ ಚಿತ್ರವನ್ನು ಸೆಪ್ಟೆಂಬರ್ ವೇಳೆಗೆ ಥಿಯೇಟರ್‌ಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.