Advertisement

ಪ್ರತಿ ಗ್ರಾಮಕ್ಕೂ ನೀರು ಪೂರೈಕೆಗೆ ಆದ್ಯತೆ: ಸಚಿವ ಪಾಟೀಲ

05:26 AM May 20, 2020 | Suhan S |

ಕೊಪ್ಪಳ: ಸ್ಥಳೀಯ ಶಾಸಕರೊಂದಿಗೆ ಕಡ್ಡಾಯವಾಗಿ ಸಭೆ ನಡೆಸಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಒದಗಿಸಲುಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಪಂ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮಳೆಯ ಕೊರತೆ ಇದೆ. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ನೀರಿನ ಕೊರತೆ ನೀಗಿಸುವ ಉದ್ದೇಶದಿಂದ ಸರ್ಕಾರ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಬೇಕು. ಇತರೆಡೆಗೆ ಟ್ಯಾಂಕರ್‌ ಮೂಲಕ ಅಥವಾ ಖಾಸಗಿ ಬೋರ್‌ ವೆಲ್‌ಗ‌ಳ ಮೂಲಕ ನೀರು ಪೂರೈಸಬೇಕು. ಈ ಯೋಜನೆ ವ್ಯಾಪ್ತಿಯ ಶಾಸಕರೊಂದಿಗೆ ಆಗಾಗ ಸಭೆ ನಡೆಸಿ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಬೇಕು. ಇಲಾಖೆಯ ಎಇಇಗಳೊಂದಿಗೆ ತಿಂಗಳಿಗೆ ಒಂದು ಸಭೆ ನಡೆಸಿ ಯೋಜನೆಯ ಸಮರ್ಪಕ ನಿರ್ವಹಣೆ ಮಾಡಬೇಕು ಎಂದರು.

ಜಲಜೀವನ್‌ ಮಿಷನ್‌ ಕೂಡ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಪೂರೈಸುವ ಮಹತ್ವಾಕಾಂಕ್ಷೆಯುಳ್ಳ ಯೋಜನೆಯಾಗಿದೆ. ಈ ಯೋಜನೆಯಡಿ ಪ್ರತಿ ಗ್ರಾಮದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಿ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಪೂರೈಸಲಾಗುತ್ತದೆ. ಈ ಯೋಜನೆಯ ವ್ಯಾಪ್ತಿ, ಒಳಪಡುವ ಗ್ರಾಮಗಳು, ಒದಗಿಸಬೇಕಾದ ನೀರಿನ ಪ್ರಮಾಣದ ವಿವರಗಳನ್ನು ಕಾಲ ಕಾಲಕ್ಕೆ ಸಂಬಂಧಿಸಿದ ಶಾಸಕರು, ಸಂಸದರು ಹಾಗೂ ಮೇಲಾಧಿಕಾರಿಗಳಿಗೆ ಮಾಹಿತಿ ಒದಗಿಸಿ ಎಂದರು. ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಆದರೆ ಅವುಗಳಲ್ಲಿ ಬಹಳಷ್ಟು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಶಾಸಕರ ಆರೋಪದ ಕುರಿತು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗೆ ಪ್ರಶ್ನಿಸಿದ ಸಚಿವರು, ಪ್ರಸ್ತುತ ಘಟಕಗಳ ಸ್ಥಿತಿಗತಿ ವರದಿ ನೀಡುವಂತೆ ಸೂಚಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಜಿಲ್ಲೆಯಲ್ಲಿ ರಚಿಸಿದ ಕಾರ್ಯಪಡೆ ನಿರ್ಧಾರವೇಅಂತಿಮ. ಕಾರ್ಯಪಡೆ ಸಭೆಯಲ್ಲಿ ಅಂಗೀಕಾರವಾದ ವಿಷಯವನ್ನು ಅಥವಾ ಆದೇಶವನ್ನು ಉಲ್ಲಂಘಿಸಿ ಇಲಾಖೆ ಅಧಿಕಾರಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುವ ಕ್ರಷರ್‌ ಬಂದ್‌ ಮಾಡಿಸಿ ನಿಗದಿತ ಮೊತ್ತದ ದಂಡವನ್ನು ವಸೂಲಿ ಮಾಡಿ. ದಂಡ ಪಾವತಿ ಮಾಡದ ಯಾವುದೇ ಕ್ರಷರ್‌ ಮಾಲೀಕರ ಒತ್ತಡಕ್ಕೆ ಅಥವಾ ಯಾವುದೇ ಪ್ರಭಾವಕ್ಕೆ ಒಳಗಾಗಿ ಕ್ರಷರ್‌ ಮುಂದುವರಿಸಲು ಅನುಮತಿ ನೀಡುವಂತಿಲ್ಲ. ದ್ರಾಕ್ಷಿ ತೋಟದಲ್ಲಿ ಬಳಸುವ ಕಂಬಗಳ ಕಲ್ಲುಗಳಿಗೆ ಹೆಚ್ಚು ಬೇಡಿಕೆ ಇದೆ. ಅದರಂತೆ ಬಹುದೊಡ್ಡ ಅಕ್ರಮವೂ ಇದೆ. ಆದ್ದರಿಂದ ಜಿಲ್ಲೆಯಲ್ಲಿ ಕಲ್ಲು ಒಡೆಯುವ ಯಾವುದೇ ಸಂಸ್ಥೆ ಕಡ್ಡಾಯವಾಗಿ ತಿಂಗಳೊಳಗಾಗಿ ಪರವಾನಗಿ ಪಡೆಯಬೇಕು. ಪರವಾನಗಿ ಪಡೆಯದೆ ಕಲ್ಲು ಒಡೆಯುವುದು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಸಂಸದ ಸಂಗಣ್ಣ ಕರಡಿ, ಡಿಸಿ ಪಿ. ಸುನೀಲ್‌ ಕುಮಾರ, ಜಿಪಂ ಸಿಇಒ ರಘುನಂದನ ಮೂರ್ತಿ, ಶಾಸಕರಾದ ಹಾಲಪ್ಪ ಆಚಾರ್‌, ಪರಣ್ಣ ಮುನವಳ್ಳಿ, ಬಸವರಾಜ ದಡೇಸುಗೂರು ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next