ಧಾರವಾಡ: ಅಭಿವೃದ್ಧಿಯಲ್ಲಿ ಅದರಲ್ಲೂ ಮಹಿಳೆಯರ ಸಬಲೀಕರಣ ಹಾಗೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೋಟರಿ ಕ್ಲಬ್‌ಗಳು ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ರೋಟರಿ ಕ್ಲಬ್ ಅಂತಾರಾಷ್ಟ್ರೀಯ ಅಧ್ಯಕ್ಷ ಶೇಖರ ಮೆಹ್ತಾ ಹೇಳಿದರು. ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಧಾರವಾಡ ರೋಟರಿ ಸಂಸ್ಥೆಯ 80ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಂಕಷ್ಟದ ಸಮಯ ಇನ್ನೂ ಮುಗಿದಿಲ್ಲ. ಎಲ್ಲ ರೋಟರಿ ಸದಸ್ಯರು ಮಾನವೀಯತೆ ದೃಷ್ಟಿಯಿಂದ ಸಮಾಜಮುಖೀ ಕೆಲಸ ಕೈಗೊಳ್ಳಬೇಕು. ಗ್ರಾಮೀಣ ಹಾಗೂ ಹಿಂದುಳಿದ ಭಾಗಗಳಲ್ಲಿ ಕಟ್ಟಕಡೆಯ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು. ಮಹಿಳೆಯರು ಸಶಕ್ತರಾಗುವಂತೆ ಮಾಡಲು ಕಾರ್ಯಯೋಜನೆ ಹಮ್ಮಿಕೊಂಡು ಅನುಷ್ಟಾನಗೊಳಿಸಬೇಕು ಎಂದರು.
ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಡಾ| ರಾಜನ ದೇಶಪಾಂಡೆ ಮಾತನಾಡಿ, ಧಾರವಾಡ ರೋಟರಿ ಕ್ಲಬ್ 1940ರಲ್ಲಿ ಸ್ಥಾಪನೆಗೊಂಡಿದ್ದು, ಸುದೀರ್ಘ 80 ವರ್ಷಗಳನ್ನು ಪೂರೈಸಿದೆ. ಬೆಂಗಳೂರು ನಂತರದ ಅತ್ಯಂತ ಹಳೆಯ ಕ್ಲಬ್ ಇದಾಗಿದ್ದು, ಉತ್ತರ ಕರ್ನಾಟಕದ ಪ್ರಥಮ ರೋಟರಿ ಸಂಸ್ಥೆಯಾಗಿದೆ. ಇದರ ಅಡಿಯಲ್ಲಿ ಒಟ್ಟು ಐದು ಕ್ಲಬ್‌ಗಳು ಅಸ್ತಿತ್ವಕ್ಕೆ ಬಂದಿದ್ದು, ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಿವೆ ಎಂದು ತಿಳಿಸಿದರು.
80ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಧಾರವಾಡದ ಕಾಮನಕಟ್ಟಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ.2 ಶಿಥಿಲಗೊಂಡಿದ್ದು, ಇದನ್ನು ಜೀರ್ಣೋದ್ಧಾರ ಮಾಡಲು ದತ್ತು ಪಡೆದು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಇದಲ್ಲದೇ 25 ಜನ ಹೆಣ್ಣು ಮಕ್ಕಳನ್ನು ರೋಟರಿ ಸದಸ್ಯರು ದತ್ತು ಪಡೆದು ಅವರ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲು ಮುಂದೆ ಬಂದಿದ್ದು, ಇದರ ಜತೆಗೆ ಬಿಆರ್‌ಟಿಎಸ್ ಬಸ್ ನಿಲ್ದಾಣದಲ್ಲಿ ಸುಸಜ್ಜಿತವಾದ ಬ್ರೆಸ್ಟ್ ಫೀಡಿಂಗ್ ಸೆಂಟರ್ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.
ಇದಕ್ಕೂ ಮುನ್ನ ರೋಟರಿ ಸಂಸ್ಥೆಯ ಸದಸ್ಯರು ಶೇಖರ ಮೆಹ್ತಾ ಅವರನ್ನು ಸಾಂಪ್ರದಾಯಿಕವಾಗಿ ಚಂಡಿವಾದ್ಯ, ವೇದಘೋಷಗಳ ಮೂಲಕ ಕುಂಕುಮ ಆರತಿ ಮೂಲಕ ಸ್ವಾಗತಿಸಿದರು. ರೋಟರಿ ಕ್ಲಬ್ ಧಾರವಾಡ ಅಧ್ಯಕ್ಷರಾದ ವಿಜಯಕುಮಾರ ಕಟ್ಟಿಮನಿ ಅವರು ರೋಟರಿ ಶಾಲೆ ನಿರ್ಮಾಣಕ್ಕಾಗಿ ಒಂದು ಎಕರೆ ಜಮೀನನ್ನು ಟೈವಾಕ್ ಬಳಿ ದೇಣಿಗೆಯಾಗಿ ನೀಡಿದರು. ಈ ಶಾಲಾ ಕಟ್ಟಡದ ಮಾದರಿಯನ್ನು
ಉದ್ಘಾಟಿಸಲಾಯಿತು.
ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ರವಿ ದೇಶಪಾಂಡೆ ರೋಟರಿ ಕ್ಲಬ್ ಪರಿಚಯ, ಬೆಳವಣಿಗೆ ಹಾಗೂ ಇತಿಹಾಸ ಬಗ್ಗೆ ಮಾಹಿತಿ ನೀಡಿದರು. ಖ್ಯಾತ ಗಾಯಕರಾದ ಪಂ| ವೆಂಕಟೇಶಕುಮಾರ ಹಾಗೂ ಕ್ಲಬ್ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು. ವಿಜಯಕುಮಾರ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಎ.ಸಿ. ತಹಶೀಲ್ದಾರ್ ಸ್ವಾಗತಿಸಿದರು. ಕ್ಲಬ್ ಕಾರ್ಯದರ್ಶಿ ಲಕ್ಷ್ಮೀಕಾಂತ ನಾಯಕ ವಂದಿಸಿದರು. ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದ ರೋಟರಿ ಅಧ್ಯಕ್ಷರು-ಪದಾಧಿಕಾರಿಗಳು ಪಾಲ್ಗೊಂಡಿದ್ದರು.