ದೇವದುರ್ಗ: ಎರಡು ವರ್ಷದ ಗೌರವಧನ ಪಾವತಿಸುವಂತೆ ಕೇಳಿದ 20 ಮಂದಿ ಅತಿಥಿ ಉಪನ್ಯಾಸಕರನ್ನು ಪ್ರಾಂಶುಪಾಲರು ಕೋಣೆಯಲ್ಲಿ ಕೂಡಿ ಹಾಕಿ ಬೀಗ ಜಡಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗದ ಸರ್ಕಾರಿ ತಾಂತ್ರಿಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ನಡೆದಿದೆ.
ಪಟ್ಟಣದ ಹೊರವಲಯದಲ್ಲಿನ ಸರ್ಕಾರಿ ತಾಂತ್ರಿಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೇಮಕಗೊಂಡ ಅತಿಥಿ ಉಪನ್ಯಾಸಕರಿಗೆ ಕಳೆದ 2 ವರ್ಷಗಳಿಂದ ಗೌರವಧನ ನೀಡದೆ ಪ್ರಾಂಶುಪಾಲರು ಸತಾಯಿಸುತ್ತಿದ್ದರು. ಗೌರವಧನ ಪಾವತಿಸುವಂತೆ ಕೇಳಿದ್ದಕ್ಕೆ ಆಕ್ರೋಶಗೊಂಡ ಪ್ರಾಂಶುಪಾಲರು ಮೂವರು ಮಹಿಳೆಯರು ಸೇರಿದಂತೆ 20 ಅತಿಥಿ ಉಪನ್ಯಾಸಕರನ್ನು ಸುಮಾರು ಒಂದು ತಾಸು ಕೋಣೆಯಲ್ಲಿ ಕೂಡಿ ಹಾಕಿ ಬೀಗ ಜಡಿದಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕೋಣೆಯ ಬೀಗ ತೆಗೆದು ಅತಿಥಿ ಉಪನ್ಯಾಸಕರನ್ನು ಬಂಧಮುಕ್ತಗೊಳಿಸಿದರು. ಕೋಣೆಯಲ್ಲಿ ಕೂಡಿ ಹಾಕಿದ ಬಗ್ಗೆ ಪೊಲೀಸರು ಪ್ರಶ್ನಿಸಿದರೆ ಪ್ರಾಂಶುಪಾಲರು ಉಡಾಫೆ ಉತ್ತರ ನೀಡಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರಾಂಶುಪಾಲರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಗೌರವಧನ ಪಾವತಿಸುವಂತೆ ಹಲವು ಬಾರಿ ಕೋರಿದರೂ ಪ್ರಾಂಶುಪಾಲರು ವೇತನ ಪಾವತಿಸುತ್ತಿಲ್ಲ ಎಂದು ಅತಿಥಿ ಉಪನ್ಯಾಸಕರು ಆರೋಪಿಸಿ ದ್ದಾರೆ.
23ರಂದು ಪರೀಕ್ಷೆಗಳು ಆರಂಭವಾಗಲಿದ್ದು,ಗೌರವಧನ ನೀಡುವವರೆಗೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದರು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರತಿಭಟನೆ ಮಾಡದಂತೆ ಪೊಲೀಸರು ಮನವಿ ಮಾಡಿದರು. ಗೌರವಧನ ಪಾವತಿಗೆ ದಿನಾಂಕ ನಿಗದಿಪಡಿಸಿ ಲಿಖೀತ ಭರವಸೆ ನೀಡುವಂತೆ ಪಟ್ಟು ಹಿಡಿದರು. ಅನುಕಂಪ ಆಧಾರದ ಮೇಲೆ ಬಂದ ದ್ವಿತೀಯ ದರ್ಜೆ ಸಹಾಯಕಿ 10ನೇ ತರಗತಿ ಓದಿದ್ದರಿಂದ ಕೆಲ ಬಿಲ್‌ಗಳನ್ನು ಮಾಡಲು ಸಮಸ್ಯೆ ಆಗುತ್ತಿದೆ ಎಂದು ಪ್ರಾಂಶುಪಾಲರು ಜಾರಿಕೊಂಡರು.
2 ವರ್ಷಗಳಿಂದ 20 ಅತಿಥಿ ಉಪನ್ಯಾಸಕರು ವೇತನವಿಲ್ಲದೆ ವಿದ್ಯಾರ್ಥಿಗಳಿಗೆ ಬೋಧಿ ಸಬೇಕಿದೆ. ಸಮಸ್ಯೆ ಕುರಿತು ಹಲವು ಬಾರಿ ಪ್ರಾಂಶುಪಾಲರ ಗಮನಕ್ಕೆ ತಂದರೂ ಈವರೆಗೆ ಗೌರವಧನ ನೀಡಿಲ್ಲ. ಕೋಣೆಯಲ್ಲಿ ಕೂಡಿ ಹಾಕಿ ಏಕಾಏಕಿ ಬೀಗ ಹಾಕಿದರು. ಪೊಲೀಸರು ಬಂದು ಬೀಗ ತೆಗೆದಿದ್ದಾರೆ. ಪ್ರಾಂಶುಪಾಲರ ವಿರುದ್ಧ ದೂರು ನೀಡಲಾಗುವುದು.
– ಹೊನ್ನಪ್ಪ, ಅತಿಥಿ ಉಪನ್ಯಾಸಕರು