ಪುಣೆ: ದೇಶದಲ್ಲಿ ಕೋವಿಡ್ 19 ವೈರಸ್ ಕಾಣಿಸಿಕೊಂಡ ದಿನದಿಂದಲೂ ತಮ್ಮ ಸ್ಫೂರ್ತಿಯ ಮಾತುಗಳಿಂದ ದೇಶವಾಸಿಗಳಿಗೆ ಧೈರ್ಯ ತುಂಬುತ್ತಾ ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದೀಗ ಆರೋಗ್ಯ ವೀರರ ಶ್ರಮವನ್ನು ಶ್ಲಾಘಿಸಿದ್ದಾರೆ. ಪುಣೆಯಲ್ಲಿನ ನಾಯ್ಡು ಆಸ್ಪತ್ರೆಯಲ್ಲಿ ಸೋಂಕಿತರ ಸೇವೆಯಲ್ಲಿ ನಿರತರಾಗಿರುವ ಶುಶ್ರೂಶಕಿ ಛಾಯಾ ಮೊಬೈಲ್‌ಗೆ ಶುಕ್ರವಾರ ಪ್ರಧಾನಿ ಕಚೇರಿಯಿಂದ ಕರೆ ಬಂದಿದೆ.
ಅತ್ತಕಡೆಯಿಂದ ಸ್ವತಃ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಆರಂಭದಲ್ಲಿ ಛಾಯಾ ಅವರ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಬಳಿಕ ರೋಗಿಗಳ ಆರೈಕೆ, ಕುಟುಂಬ ಸದಸ್ಯರು, ಅವರ ಆರೋಗ್ಯದ ಕುರಿತು ಕೇಳಿದ್ದಾರೆ. ಈ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕುಟುಂಬ ಸದಸ್ಯರು ನಿಮ್ಮ ಸುರಕ್ಷತೆ ಬಗ್ಗೆ ಆತಂಕಪಡುವುದಿಲ್ಲವೇ ಎಂಬ ಪ್ರಧಾನಿ ಪ್ರಶ್ನೆಗೆ ಉತ್ತರಿಸಿದ ಛಾಯಾ ಅವರು, ಆತಂಕ ಇಲ್ಲ ಎಂದಲ್ಲ. ಆದರೆ, ಇಂಥ ಪರಿಸ್ಥಿತಿಯಲ್ಲಿ ನಾವು ಕೆಲಸ ಮಾಡಲೇಬೇಕು ಎಂದಿದ್ದಾರೆ. ರೋಗಿಗಳಿಗೆ ಧೈರ್ಯ ತುಂಬುವ ಕುರಿತು ಕೇಳಿದಾಗ, ಚಿಕಿತ್ಸೆ ಪಡೆಯುವ ಶಂಕಿತರಿಗೆ ಮುಂದೇನಾಗುವುದೋ ಎಂಬ ಭಯವಿರುತ್ತದೆ. ನಾವು ಅವರಿಗೆ ಸಮಾಧಾನ ಹೇಳುತ್ತೇವೆ. ಪರೀಕ್ಷೆಯ ವರದಿ ನೆಗಿಟಿವ್ ಬರುತ್ತದೆ ಎಂದು ಧೈರ್ಯ ತುಂಬುತ್ತೇವೆ, ಎಂದು ಛಾಯಾ ಮಾಹಿತಿ ನೀಡಿದ್ದಾರೆ.
ಬಳಿಕ, ನಿಸ್ವಾರ್ಥ ಸೇವೆ ಹಾಗೂ ಬದ್ಧತೆಗಾಗಿ ಛಾಯಾ ಅವರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ನಿಮ್ಮಂತೆಯೇ ಲಕ್ಷಾಂತರ ಶುಶ್ರೂಶಕಿಯರು, ಅರೆವೈದ್ಯ ಸಿಬ್ಬಂದಿ ಮತ್ತು ವೈದ್ಯರು ದೇಶದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಅಕ್ಷರಶಃ ತಪಸ್ವಿಗಳಂತೆ ಕಾಯಾನಿರ್ವಹಿಸುತ್ತಿದ್ದಾರೆ. ಅವರೆಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಸ್ಯಾನಿಟೈಸರ್ ರೀತಿಯ ಉತ್ಪನ್ನ ತಯಾರಿಸಿ
ಆಯುಷ್ ಔಷಧ ತಯಾರಕರು ತಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ನಮಗೆ ಅಗತ್ಯವಿರುವ ಹಾಗೂ ಅತಿ ಹೆಚ್ಚು ಬೇಡಿಕೆ ಇರುವ ಸ್ಯಾನಿಟೈಸರ್ ರೀತಿಯ ಉತ್ಪನ್ನಗಳ ಉತ್ಪಾದನೆಗೆ ಮುಂದಾಗುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ. ಸೋಂಕಿಗೆ ಆಯುಷ್‌ನಲ್ಲಿ ಪರಿಹಾರವಿದೆ ಎಂಬ ಆಧಾರ ರಹಿತ ವದಂತಿಗಳ ಕುರಿತಾಗಿಯೂ ಗಮನಹರಿಸುವ ಅಗತ್ಯವಿದೆ ಎಂದಿದ್ದಾರೆ.