ಬಂಟ್ವಾಳ: ಗ್ರಾಮೀಣ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಜ್ಯ ಸರಕಾರವು ದೇಶದಲ್ಲೇ ಮೊದಲ ಬಾರಿಗೆ ಪ್ರತೀ ಗ್ರಾಮ ಪಂಚಾಯತ್‌ಗಳಲ್ಲಿ 2 ವಿವೇಕಾನಂದ ಸ್ವಸಹಾಯ ಸಂಘಗಳನ್ನು ರಚಿಸಿ, ಅವುಗಳಿಗೆ 1.5 ಲಕ್ಷ ರೂ. ಸರಕಾರದಿಂದ ಸಬ್ಸಿಡಿ ಸೇರಿದಂತೆ ಬ್ಯಾಂಕ್‌ನಿಂದ 5 ಲಕ್ಷ ರೂ. ಹಾಗೂ 10 ಸಾವಿರ ರೂ. ನೋಂದಣಿ ಶುಲ್ಕ ನೀಡುವ ಯೋಜನೆ ರೂಪಿಸಲಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಧಾರವಾಡದಲ್ಲಿ ಉದ್ಘಾಟನೆ ಮಾಡಲಿದ್ದಾರೆ ಎಂದು ರಾಜ್ಯ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ| ಕೆ.ಸಿ. ನಾರಾಯಣ ಗೌಡ ಹೇಳಿದರು.
ಅವರು ರವಿವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾಭಾರತಿ ಅಖೀಲ ಭಾರತೀಯ ಶಿûಾ ಸಂಸ್ಥಾನ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟವನ್ನು ಉದ್ಘಾಟಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರವು ಕ್ರೀಡೆಗೆ ವಿಶೇಷ ಶಕ್ತಿ ತುಂಬುವ ಕಾರ್ಯ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು 75 ಮಕ್ಕಳನ್ನು ದತ್ತು ಪಡೆದು ಅವರ ತರಬೇತಿಗಾಗಿ ತಲಾ 10 ಲಕ್ಷ ರೂ.ಗಳನ್ನು ನೀಡಲಿದೆ. ಜತೆಗೆ ದೇಶದಲ್ಲೇ ಮೊದಲ ಬಾರಿ ಡಾ| ಸುಬ್ರಹ್ಮಣ್ಯ ನೇತೃತ್ವದಲ್ಲಿ ಯುವ ನೀತಿ ರೂಪಿಸುವ ಜತೆಗೆ ರಾಜ್ಯದಲ್ಲಿ ಯುವ ಬಜೆಟ್ ಕೂಡ ಮಂಡನೆಯಾಗಲಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಕ್ಯಾಬಿನೆಟ್‌ನಲ್ಲಿ ಒಪ್ಪಿಗೆಯನ್ನೂ ನೀಡಿದ್ದಾರೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಕ್ರೀಡಾಳುಗಳಿಗೆ ಶುಭ ಹಾರೈಸಿದರು. ವಿದ್ಯಾಭಾರತಿ ಕರ್ನಾಟಕದ ಅಧ್ಯಕ್ಷ ಪರಮೇಶ್ವರ ಹೆಗಡೆ ಬೆಳಗಾವಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಿದ್ಯಾಭಾರತಿ ದಕ್ಷಿಣ ಕ್ಷೇತ್ರ ಕ್ರೀಡಾ ಸಂಯೋಜಕ ಬಿ.ಡಿ. ಮಣಿ ಚೆನ್ನೈ, ವಿದ್ಯಾಭಾರತಿಯ ಪ್ರಾಂತ ಉಪಾಧ್ಯಕ್ಷ ಶ್ರೀಪತಿ, ದ.ಕ. ಜಿಲ್ಲಾಧ್ಯಕ್ಷ ಲೋಕಯ್ಯ ಡಿ. ಉಪಸ್ಥಿತರಿದ್ದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಸ್ವಾಗತಿಸಿ, ಪ.ಪೂ. ಕಾಲೇಜು ಪ್ರಾಂಶುಪಾಲ ವಸಂತ ಬಲ್ಲಾಳ್ ವಂದಿಸಿದರು. ಪ್ರಾಧ್ಯಾಪಕಿಯರಾದ ಚೈತನ್ಯ ಪ್ರಕಾಶ್ ಹಾಗೂ ರಾಜೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.