ದಾವಣಗೆರೆ: ನೂತನ ಪಿಂಚಣಿ ಯೋಜನೆರದ್ದು, ಶಿಕ್ಷಕರ ವರ್ಗಾವಣೆ, ಪದವೀಧರರು ಮತ್ತು ಇತರೆ ಶಿಕ್ಷಕರಿಗೆ ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಶಿಕ್ಷಕರು, ಸಂಘದ ಪದಾಧಿಕಾರಿಗಳು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಮ್ಮ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಮೂರು ವರ್ಷದಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ವರ್ಗಾವಣೆಗೆ ಸಂಬಂಧಿಸಿದಂತೆ ಇದ್ದಂತಹ ಹಲವಾರು ತಾಂತ್ರಿಕ ಸಮಸ್ಯೆ, ಗೊಂದಲ ನಿವಾರಣೆ ಆಗಿವೆ. ಸರ್ಕಾರ ಆದಷ್ಟು ಬೇಗ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದೆಲ್ಲೆಡೆ 28 ಸಾವಿರ ಮುಖ್ಯೋಪಾಧ್ಯಾಯರಿದ್ದು, ಬಡ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ 10 ರಿಂದ 30 ವರ್ಷಗಳಲ್ಲಿ ಯಾವುದೇ ರೀತಿಯ ಆರ್ಥಿಕ ಸೌಲಭ್ಯವೇ ದೊರೆತಿಲ್ಲ. ಶಾಲಾ ಆಡಳಿತದ ನಿರ್ವಹಣೆ ಮಾಡುತ್ತಿದ್ದರೂ ಆರ್ಥಿಕ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ. ಅವರ ಜೊತೆ
ಕೆಲಸ ಮಾಡುವಂತಹ ಸಹ ಶಿಕ್ಷಕರಿಗೆ ಎಲ್ಲಾ ರೀತಿಯ ಆರ್ಥಿಕ ಸೌಲಭ್ಯ ದೊರೆಯುತ್ತಿವೆ.
ಹಾಗಾಗಿ ಮುಖ್ಯೋಪಾಧ್ಯಾಯರು, ಬಡ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಆರ್ಥಿಕ ಸೌಲಭ್ಯ ಒದಗಿಸಬೇಕು ಎಂದರು. ನೂತನ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸಮಿತಿಯ ವರದಿ ಪಡೆದ ತಕ್ಷಣ ಈ ಯೋಜನೆ ರದ್ದುಗೊಳಿಸಬೇಕು. ಗ್ರಾಮೀಣ ಕೃಪಾಂಕ ಸೌಲಭ್ಯ ಪಡೆದುಕೊಂಡು ಸೇವೆಯಿಂದ ವಜಾ ಆಗಿರುವ ಶಿಕ್ಷಕರ ಪೂರ್ಣ ಸೇವೆಯನ್ನು ಪರಿಗಣಿಸಿ ಎಲ್ಲಾ ಸೌಲಭ್ಯ ನೀಡಬೇಕು. ಶಿಕ್ಷಕರನ್ನು ಬಿಎಲ್‌ಓ ಹಾಗೂ ಇತರ ಶಿಕ್ಷಣೇತರ
ಕಾರ್ಯಗಳಿಂದ ಮುಕ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಪದ್ಮಲತಾ, ಜಿಲ್ಲಾಧ್ಯಕ್ಷ ಎನ್. ತಿಪ್ಪೇಶಪ್ಪ, ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಎಂ. ಸಿದ್ದೇಶ್, ಸಹ ಕಾರ್ಯದರ್ಶಿ ಚಂದ್ರಪ್ಪ, ಗಂಗಾಧರ್ ನಾಯ್ಕ, ಶಿವಮೂರ್ತಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.