Advertisement
ಗ್ರಾಮ ಪಂಚಾಯತ್ಗಳು, ಪುರಸಭೆ ಮನೆ ಮನೆಗೆ ಬಂದು ಹಸಿ ಕಸ, ಒಣ ಕಸವನ್ನು ಪ್ರತ್ಯೇಕಿಸಿ ಕಸ ವಿಲೇವಾರಿಗೆ ಹಲವಾರು ಕ್ರಮ ಕೈಗೊಂಡಿದ್ದರೂ ರಸ್ತೆ ಬದಿ ಕಸ, ತ್ಯಾಜ್ಯ ಎಸೆಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಬಂಟ್ವಾಳ -ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಚಾಯತ್ಗಳು, ಬಂಟ್ವಾಳ ಪುರಸಭೆ ಇದನ್ನು ತೆರವುಗೊಳಿಸಿದರೂ ಮತ್ತೆ ಕಸದ ರಾಶಿ ಪ್ರತ್ಯಕ್ಷವಾಗುತ್ತದೆ. ಹೊಟೇಲ್ಗಳು, ಅಂಗಡಿ ವ್ಯಾಪಾರಸ್ಥರು, ವಾಹನ ಪ್ರಯಾಣಿಕರು ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಚೀಲಗಳನ್ನು ರಸ್ತೆ ಬದಿ ಎಸೆಯುವುದು ಜತೆಗೆ ವಾಹನಗಳಲ್ಲಿ ತ್ಯಾಜ್ಯಗಳನ್ನು ತಂದು ಜನರಹಿತ ರಸ್ತೆ ಬದಿಗಳಲ್ಲಿ ಬಿಸಾಡುತ್ತಿರುವುದು ಕಂಡು ಬಂದಿದೆ.
ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ಹಂಚಿಕಟ್ಟೆ , ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿ ರಸ್ತೆ ಬದಿ ಇಂತಹ ಕಸ ಶೇಖರಣೆಯಾಗಿದೆ. ಗ್ರಾಮ ಪಂಚಾಯತ್ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡರೂ ಅನಾಗರಿಕವಾಗಿ ರಸ್ತೆ ಬದಿ ಕಸ ಬಿಸಾಡುತ್ತಿದ್ದಾರೆ. ಇಲಾಖೆ ಮತ್ತು ಕಾವಳಪಡೂರು ಗ್ರಾಪಂ ಇತ್ತೀಚೆಗಷ್ಟೇ ರಸ್ತೆ ಬದಿಯನ್ನು ಜೆಸಿಬಿ ಯಂತ್ರದ ಮೂಲಕ ಸ್ವತ್ಛಗೊಳಿಸಿತ್ತು. ಆದರೆ ಮರು ದಿನವೇ ರಸ್ತೆ ಬದಿ ಕಸ ಪ್ರತ್ಯಕ್ಷವಾಗಿದೆ. ರಸ್ತೆಬದಿ ದುರ್ನಾತ
ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಜನರಹಿತ ಪ್ರದೇಶಗಳು ಇಂತಹ ಅಕ್ರಮ ತ್ಯಾಜ್ಯ ವಿಲೇವಾರಿಯ ತಾಣಗಳಾಗಿವೆ. ಇದರಲ್ಲಿ ಕೋಳಿ ತ್ಯಾಜ್ಯಗಳೂ ತುಂಬಿರುತ್ತದೆ. ಇದು ದುರ್ನಾತವನ್ನು ಪ್ರಯಾಣಿಕರು ಮೂಗು ಮುಚ್ಚಿ ಪ್ರಯಾಣಿಸುವ ದುಸ್ಥಿತಿ ಎದುರಾಗಿದೆ.
Related Articles
ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಇಂತಹ ಆಯಕಟ್ಟಿನ ಸ್ಥಳಗಳಲ್ಲಿ ಕಸ ಬಿಸಾಡದಂತೆ ಎಚ್ಚರಿಕೆ ಬೋರ್ಡ್ ಹಾಕಿದ್ದರೂ ಅಲ್ಲಿಯೇ ಕಸ ಎಸೆಯುವುದನ್ನು ತಡೆಯುವುದು ಸವಾಲಾಗಿದೆ. ಇಂತಹ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಿ ತಪ್ಪಿತಸ್ಥರನ್ನು ಕಂಡು ಹಿಡಿದು ಶಿಕ್ಷೆ ವಿಧಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Advertisement