Advertisement

Mangaluru ಮೃತರ ಹೆಸರಲ್ಲಿ ಸೌಲಭ್ಯ ದುರುಪಯೋಗ ತಡೆಗಟ್ಟಿ: ಯೋಜನಾ ಕಾರ್ಯದರ್ಶಿ ಸೂಚನೆ

11:56 PM Dec 08, 2023 | Team Udayavani |

ಮಂಗಳೂರು: ಸರಕಾರದ ವಿವಿಧ ಫಲಾನುಭವಿಗಳ ಆಧಾರಿತ ಯೋಜನೆಗಳ ಕೆಲವು ಫಲಾನುಭವಿಗಳು ಮರಣ ಹೊಂದಿದ್ದರೂ ಅವರ ಸೌಲಭ್ಯ ಮುಂದುವರಿಯುತ್ತಿರುವ ಬಗ್ಗೆ ಹಲವು ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಆಗಿಂದಾಗ್ಗೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಯೋಜನೆ ಮತ್ತು ಆರ್ಥಿಕ ಇಲಾಖೆ ಕಾರ್ಯದರ್ಶಿ ವಿಶಾಲ್‌ ಸೂಚಿಸಿದ್ದಾರೆ.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಪಿಂಚಣಿ, ಗ್ಯಾರಂಟಿ, ಉದ್ಯೋಗ ಖಾತ್ರಿ, ಪಿ.ಎಂ. ಕಿಸಾನ್‌ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಂತೆ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಫಲಾನುಭವಿ ಬದುಕಿರುವವರೆಗೆ ಯೋಜನೆಯ ಲಾಭ ಸಿಗಲಿದೆ.

ಆದರೆ ಕೆಲವು ಫಲಾನುಭವಿಗಳು ಮರಣ ಹೊಂದಿದ್ದರೂ ಅವರ ಕುಟುಂಬದವರು ಅದನ್ನು ಮುಚ್ಚಿಟ್ಟು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಆಗಿಂದಾಗೆ ತಪಾಸಣೆ ನಡೆಸಿ ಯೋಜನೆಯ ದುರುಪಯೋಗ ತಡೆಗಟ್ಟಬೇಕು ಎಂದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆದಾರರಿಗೆ ಕಡಿಮೆ ಪ್ರೀಮಿಯಂಗೆ ದೊಡ್ಡ ಮೊತ್ತದ ವಿಮಾ ಸೌಲಭ್ಯ ಸಿಗುತ್ತಿದೆ. ವಿವಿಧ ಕಚೇರಿಗಳಲ್ಲಿ ಇರುವ ಹೊರಗುತ್ತಿಗೆ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಇದರ ಅರಿವು ಮೂಡಿಸಬೇಕು. ಕಂದಾಯ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಬೇಕು. ಅಗತ್ಯವಿದ್ದರೆ ಅನುಭವಿ ನಿವೃತ್ತ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಬೇಕು ಎಂದು ಅವರು ತಿಳಿಸಿದರು.

ಕುಡಿಯುವ ನೀರಿನ ಯೋಜನೆಗಳಲ್ಲಿ ನೀರಿನ ಮೂಲ ದೃಢಪಟ್ಟ ಅನಂತರವೇ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ನೀರು ಸಂಗ್ರಹಕ್ಕೆ ಹೆಚ್ಚುವರಿ ಜಮೀನು ಅಗತ್ಯವಿದ್ದರೆ ನೆಲ ಬಾಡಿಗೆ ಆಧಾರದಲ್ಲಿ ಪಡೆಯಲು ಪರಿಶೀಲಿಸಬೇಕು. ಮಂಗಳೂರು ನಗರದಲ್ಲಿ ಹೊಸದಾಗಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.

Advertisement

ರಾಷ್ಟ್ರೀಯ ಬಾಲ ಸ್ವಾಸ್ಥ   ಯೋಜನೆಯಲ್ಲಿ ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯ ತಪಾಸಣೆಯನ್ನು ಪರಿಣಾಮಕಾರಿ ಯಾಗಿ ನಡೆಸಬೇಕು. ಮಕ್ಕಳ ಹಲ್ಲು, ಕಣ್ಣು, ಕಿವಿ, ಮೂಗು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನರ್ಸರಿ, ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಂದಣಿ ಅಧಿಕಾರಿಯಾಗಿದ್ದಾರೆ. ಈ ಶಾಲೆಗಳಲ್ಲಿ ಮಕ್ಕಳ ಮಾಹಿತಿ ಅವರಲ್ಲಿರಬೇಕು. ಹುಟ್ಟಿದ ಮಗುವಿನಿಂದ ಆರು ವರ್ಷದವರೆಗಿನ ಮಕ್ಕಳ ಮಾಹಿತಿ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಇರಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್‌ ಕೆ., ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌ ಕುಮಾರ್‌, ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next