ಸುವರ್ಣ ವಿಧಾನಸೌಧ: ಪಂಚಮಸಾಲಿ ಮೀಸಲಾತಿ ಬೆನ್ನಲ್ಲೇ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ಇದೀಗ ಸರ್ಕಾರದ ಮೇಲೆ ಒತ್ತಡ ಶುರುವಾಗಿದೆ.
ಗುರುವಾರ ಕಾಂಗ್ರೆಸ್‌ನ ಒಕ್ಕಲಿಗ ಸಮುದಾಯದ ವಿಧಾನಪರಿಷತ್ ಸದಸ್ಯರಾದ ಸಿ.ಎಂ. ಲಿಂಗಪ್ಪ , ಎಸ್. ರವಿ, ಕೆ. ಗೋವಿಂದರಾಜು, ಅನಿಲ್ ಕುಮಾರ್, ಮಂಜುನಾಥ ಭಂಡಾರಿ, ಮಧು ಜಿ. ಮಾದೇಗೌಡ, ದಿನೇಶ್ ಗೂಳಿಗೌಡ ಅವರು ತುರ್ತು ಪತ್ರಿಕಾಗೋಷ್ಠಿ ನಡೆಸಿ, ಒಕ್ಕಲಿಗ ಜನಾಂಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಲು ಸಮಾಜದ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ಶ್ರೀ ನಂಜಾವಧೂತ ಸ್ವಾಮೀಜಿಗಳ ನೇತೃತ್ವದಲ್ಲಿ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಲು ಹಕ್ಕೊತ್ತಾಯ ಮಾಡುತ್ತೇವೆ ಎಂದು ಹೇಳಿದರು.
ಇದು ಕಾಂಗ್ರೆಸ್ ಪಕ್ಷದ ಆಗ್ರಹ ಮಾತ್ರವಲ್ಲ. ಪಕ್ಷಾತೀತವಾಗಿ ಸಮಾಜದ ಎಲ್ಲಾ ಸಂಘಟನೆಗಳು ಬೇಡಿಕೆಯನ್ನು ಈಡೇರಿಸಲು ಸರ್ಕಾರಕ್ಕೆ ಜನವರಿ 23ರ ವರೆಗೆ ಅಂತಿಮ ಗಡುವು ನೀಡಿದ್ದೇವೆ. ಈ ಅವಧಿಯ ಒಳಗಡೆ ಮೀಸಲಾತಿ ಹೆಚ್ಚಳದ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಘೋಷಿಸಿದರು.
ಒಕ್ಕಲಿಗ ಜನಾಂಗಕ್ಕೆ ಶೇ.12ರ ಮೀಸಲಾತಿ ಕಲ್ಪಿಸಲು ಕೇಂದ್ರಕ್ಕೆ ಯಾವುದೇ ಶಿಫಾರಸು ಮಾಡುವ ಅವಶ್ಯಕತೆ ಕಂಡುಬರುವುದಿಲ್ಲ. ಒಕ್ಕಲಿಗ ಜನಾಂಗ ಈಗಾಗಲೇ ಕೇಂದ್ರದ ಒಬಿಸಿ ಪಟ್ಟಿಯಲ್ಲಿರುವುದರಿಂದ ರಾಜ್ಯ ಸರ್ಕಾರವೇ ಸ್ವಯಂ ನಿರ್ಣಯದೊಂದಿಗೆ ಒಕ್ಕಲಿಗರಿಗೆ ಶೇ.12ರ ಮೀಸಲು ಹೆಚ್ಚಳ ಘೋಷಣೆ ಮಾಡಬಹುದು. ಇತರೆ ಸಮುದಾಯಗಳ ಮೀಸಲಾತಿ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಅದರೆ ನಮಗೆ ಆಗಿರುವ ಮೀಸಲಾತಿ ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದು ಹೇಳಿದರು.
ಒಕ್ಕಲಿಗರ ಜನಸಂಖ್ಯೆಯು ರಾಜ್ಯದಲ್ಲಿ ಅಂದಾಜು ಒಂದು ಕೋಟಿ ಇಪ್ಪತ್ತು ಲಕ್ಷ ಇದೆ. ಹಳೆ ಮೈಸೂರು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಜನಾಂಗ ವಾಸಿಸುತ್ತಿದೆ. ಒಕ್ಕಲಿಗ ಜನಾಂಗಕ್ಕೆ ಮೀಸಲಾತಿ ವಿಚಾರವಾಗಿ ಹಿಂದಿನಿಂದಲೂ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ. ಹಾವನೂರು ಆಯೋಗದ ವರದಿಯನುಸಾರ ಈ ಜನಾಂಗಕ್ಕೆ ಶೇ.11ರಷ್ಟು ಮೀಸಲಾತಿ ಸಿಕ್ಕಿದ್ದು ಬಿಟ್ಟರೆ ನಂತರ ಬಂದ ಚೆನ್ನಪ್ಪರೆಡ್ಡಿ ಆಯೋಗ ಕೇವಲ ಶೇ. 4ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಈ ಶೇ.4 ಮೀಸಲಾತಿ ಒಕ್ಕಲಿಗ ಜನಾಂಗಕ್ಕೆ ಮಾತ್ರ ಸೀಮಿತವಾಗದೆ ಇನ್ನಿತರ ವರ್ಗಗಳಿಗೂ ಸೇರಿ ಹಂಚಿಕೆಯಾಗಿದೆ ಎಂದು ತಿಳಿಸಿದರು.
ಸದ್ಯ ಇರುವ ಮೀಸಲಾತಿಯಲ್ಲಿ ಶೇ.4 ಗ್ರಾಮೀಣ ಪ್ರದೇಶ ಒಕ್ಕಲಿಗರಿಗೆ ಮೀಸಲಿದೆ. ನಗರ ಪ್ರದೇಶದ ಒಕ್ಕಲಿಗರಿಗೆ ಯಾವುದೇ ಮೀಸಲಾತಿಯಿಲ್ಲ. ಇದನ್ನು ಸರಿಪಡಿಸುವಂತೆಯೂ ಕೋರಲಾಗುತ್ತಿದೆ ಎಂದು ಹೇಳಿದರು.
ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಬೇಡಿಕೆಗೆ ಸಂಬಂಧಿಸಿದಂತೆ ಸಮುದಾಯದ ನಾಯಕರ ಜತೆ ಸಭೆ ನಡೆಸಿ, ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲಾಗುವುದು.
-ಆರ್.ಅಶೋಕ್, ಕಂದಾಯ ಸಚಿವ