Advertisement

ನಗರಕ್ಕೆ ನೀರು ಸರಬರಾಜು ಮಾಡಲು ಸಿದ್ಧತೆ

09:46 PM Feb 05, 2020 | Lakshmi GovindaRaj |

ತುಮಕೂರು: ನಗರಾದ್ಯಂತ 196 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ ಮಾಡಲಾಗುತ್ತಿರುವ 24*7 ಕುಡಿಯುವ ನೀರು ಸರಬರಾಜು ಯೋಜನೆಯಿಂದ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.

Advertisement

ಶಾಸಕರ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಪ್ರಾಯೋಗಿಕವಾಗಿ ಅಶೋಕ ನಗರ ಹಾಗೂ ಜಯನಗರದಲ್ಲಿ ಚಾಲನೆ ನೀಡಲಾಗಿದೆ. ನಗರದಲ್ಲಿ 37 ಡಿಎಂಎ (ಡಿಸ್ಟ್ರಿಕ್ಟ್ ಮೀಟರಿಂಗ್‌ ಏರಿಯಾ) ರೂಪಿಸಲಾಗಿದೆ. ಈ ಮೂಲಕ 44 ಓವರ್‌ ಹೆಡ್‌ಟ್ಯಾಂಕ್‌ಗಳ ಮೂಲಕ ನಗರದಲ್ಲಿ ನೀರು ಸರಬರಾಜು ಮಾಡಲಾಗುವುದು. ಈಗಾಗಲೇ ನಗರದಲ್ಲಿ 37 ಓವರ್‌ ಹೆಡ್‌ಟ್ಯಾಂಕ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. 5 ಕಡೆ ನೂತನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇನ್ನು ಒಂದು ಕಡೆ ಜಾಗ ದೊರೆತಿದ್ದು, ಪರಿಶೀಲನೆ ಮಾಡಲಾಗುತ್ತಿದೆ. ಇನ್ನೊಂದು ನಿರ್ಮಾಣಕ್ಕೆ ಸೂಕ್ತ ಸ್ಥಳ ದೊರೆಯುತ್ತಿಲ್ಲ ಎಂದು ಹೇಳಿದರು.

ಹೇಮಾವತಿ ನೀರು ಬುಗುಡನಹಳ್ಳಿಯಿಂದ ನೇರವಾಗಿ ಟ್ಯಾಂಕರ್‌ಗಳ ಮೂಲಕ ಮನೆ ಮನೆಗೆ ತಲುಪಿಸುವ ಕಾರ್ಯ ಇದಾಗಿದೆ. 7-8 ತಿಂಗಳಲ್ಲಿ ಶೇ.75ರಿಂದ 80ರಷ್ಟು ನಗರಕ್ಕೆ ನೀರು ಸರಬರಾಜಾಗಲಿದೆ. ಕೆಲ ಭಾಗಗಳಲ್ಲಿ ಜಾಗ ಒತ್ತುವರಿ ಸಮಸ್ಯೆಯಿಂದ ಪೈಪ್‌ಲೈನ್‌ ಅಳವಡಿಸಲು ಆಗಿಲ್ಲ. ಈ ಕಾರ್ಯ ಮುಂದುವರೆದಿದೆ. 24*7 ಯೋಜನೆಯಡಿ ಬಿಡುವ ನೀರಿಗೆ ಮೀಟರ್‌ ಅಳವಡಿಕೆ ಮಾಡಲಾಗಿದ್ದು, ರೆಸಿಡೆನ್ಸಿಯಲ್‌ಗೆ 1000 ಲೀಟರ್‌ಗೆ 8 ರೂ. ಸೆಮಿ ಕಮರ್ಷಿಯಲ್‌ಗೆ 16 ರೂ. ಹಾಗೂ ಇಂಡಸ್ಟ್ರಿಯಲ್‌ಗೆ 1:4ರ ಅನುಪಾತದಲ್ಲಿ ಹಣ ಪಾವತಿಸಬೇಕಾಗುತ್ತದೆ. ಈ ಹಣದ ಮೊತ್ತದಲ್ಲಿ ಬದಲಾವಣೆಗಳು ಸಾಧ್ಯತೆಗಳಿವೆ ಎಂದು ತಿಳಿಸಿದರು.

ಗಂಗಸಂದ್ರ ಕೆರೆಗೆ ಜಾಕ್‌ವೆಲ್‌ ನಿರ್ಮಾಣ: ನಗರದ ಅಮಾನಿಕೆರೆ, ಗಂಗಸಂದ್ರ, ಮರಳೂರು ಕೆರೆಗೆ ನೀರು ತುಂಬಿಸಿಕೊಂಡರೆ ವರ್ಷ ಪೂರ್ತಿ ನೀರು ಸರಬರಾಜು ಮಾಡಬಹುದು. ಗಂಗಸಂದ್ರ ಕೆರೆಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಯಲಿದ್ದು, ಇಲ್ಲಿ ಜಾಕ್‌ವೆಲ್‌ ನಿರ್ಮಿಸಿ ಇಲ್ಲಿಂದ ಮರಳೂರು ಕೆರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಇನ್ನೂ ಹೆಬ್ಟಾಕ ಕೆರೆಯು ಕೈಗಾರಿಕೆಗೆ ಮೀಸಲಿರಿಸಿದ್ದು, ಈ ಕೆರೆಯು ವರ್ಷಪೂರ್ತಿ ತುಂಬಿರುತ್ತದೆ. ಆದರೆ ಈ ನೀರನ್ನು ಕೈಗಾರಿಕೆಗಷ್ಟೇ ಉಪಯೋಗಿಸಲಾಗುತ್ತದೆ ಎಂದರು.

ಅಮಾನಿಕೆರೆಗೆ ತುಂಬಿಸುವ ನೀರನ್ನು ಜಾಕ್‌ವೆಲ್‌ ಮೂಲಕ ಪಿಎನ್‌ಆರ್‌ ಪಾಳ್ಯದ ನೀರು ಸಂಸ್ಕರಣಾ ಘಟಕದಲ್ಲಿ ನೀರು ಶುದ್ಧೀಕರಿಸಿ ನಗರಕ್ಕೆ ಸರಬರಾಜು ಮಾಡಲಾಗುವುದು. ಬುಗುಡನಹಳ್ಳಿಯ ಕುಬೇರ ಮೂಲೆಯಲ್ಲಿರುವ 5 ಎಂಎಲ್‌ಡಿ ಸಾಮರ್ಥ್ಯ ಸಂಸ್ಕರಣಾ ಘಟಕ ಹಾಗೂ ಪಿಎನ್‌ಆರ್‌ ಪಾಳ್ಯದಲ್ಲಿರುವ 50 ಎಂಎಲ್‌ಡಿ ಸಾಮರ್ಥ್ಯದ ಸಂಸ್ಕರಣಾ ಘಟಕದಲ್ಲಿ ನೀರು ಶುದ್ಧೀಕರಿಸಲಾಗುವುದು. ಜಲಸಂಗ್ರಹಾಗಾರಗಳ ಮೂಲಕ ನೀರು ಸಂಗ್ರಹಿಸಲಾಗುವುದು. ಪಾಲಿಕೆ ಆವರಣದಲ್ಲಿರುವ ಜಲಸಂಗ್ರಹಾಗಾರದಲ್ಲಿ 22.5 ಲಕ್ಷ ಲೀಟರ್‌ ಹಾಗೂ ಸಂತೆ ಮೈದಾನದ ಬಳಿ 22.5 ಲಕ್ಷ ಲೀಟರ್‌ ಸಾಮರ್ಥ್ಯದ ಜಲಸಂಗ್ರಹಾಗಾರ ಮತ್ತು ವಿದ್ಯಾನಗರದಲ್ಲಿ 20 ಲಕ್ಷ ಲೀಟರ್‌ ಸಾಮರ್ಥ್ಯದ ಜಲಸಂಗ್ರಾಹಾಗಾರದಲ್ಲಿ ನೀರು ಸಂಗ್ರಹಿಸಿ ಸರಬರಾಜು ಮಾಡಲಾಗುವುದು ಎಂದು ಹೇಳಿದರು.

Advertisement

ಆರ್‌ಒ ಪ್ಲ್ಯಾಂಟ್‌ಗೆ ಬೀಗ: ನಗರದ 7-8 ವಾರ್ಡ್‌ಗಳಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ನೇರವಾಗಿ ನೀರು ಪಂಪ್‌ ಮಾಡಲಾಗುತ್ತದೆ. ಉಳಿದ ಇತರೆ ವಾರ್ಡ್‌ಗಳಲ್ಲಿರುವ ಟ್ಯಾಂಕ್‌ಗಳಿಗೆ ಜಲಸಂಗ್ರಹಾಗಾರ ಒಳಗೊಂಡ ನೀರು ಸರಬರಾಜು ಮಾಡಲಾಗುವುದು. ಇದೆಲ್ಲಾ ಸರಿಯಾಗಿ ಪ್ರಾರಂಭವಾದ ಮೇಲೆ ಆರ್‌ಒ ಪ್ಲ್ಯಾಂಟ್‌ಗಳು ಮುಚ್ಚುವ ಸಾಧ್ಯತೆಗಳಿವೆ. ಶುದ್ಧೀಕರಿಸಿದ ನೀರನ್ನೇ ನೇರವಾಗಿ ಮನೆಗೆ ತಲುಪಿಸವಾಗ ಆರ್‌ಒ ಪ್ಲ್ಯಾಂಟ್‌ಗಳ ಅವಶ್ಯಕತೆಯಿಲ್ಲ. ಈ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರು ಜನಪರ ಕಾರ್ಯಗಳು ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಪ್ಲ್ಯಾಂಟ್‌ ಮುಚ್ಚುವ ಸಂಭವವಿದೆ ಎಂದು ಹೇಳಿದರು. ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಕೆ.ವೇದಮೂರ್ತಿ ಉಪಸ್ಥಿತರಿದ್ದರು.

ಕಂದಾಯ ಹೆಚ್ಚಿಸಲು ಜಿಐಎಸ್‌ ಮ್ಯಾಪ್‌: ಡ್ರೋನ್‌ ಸರ್ವೆ ಹಾಗೂ ಜಿಐಎಸ್‌ ಬೇಸ್ಡ್ ಮ್ಯಾಪ್‌ನ ಬಳಕೆಯಿಂದ ಪಾಲಿಕೆಗೆ ಸಲ್ಲಬೇಕಾದ ತೆರಿಗೆ ಸರಿಯಾಗಿ ಬರುವಂತೆ ಮಾಡಲಾಗುತ್ತದೆ. ಒಂದು ಮನೆಗೆ ಇರುವ ತೆರಿಗೆ ಹಾಗೂ ಕಮರ್ಷಿಯಲ್‌ ಮಳಿಗೆಗಳಿಗೆ ತೆರಿಗೆ ಬೇರೆ ಇದೆ. ಹಾಗಾಗಿ ಸ್ವಯಂ ಆಗಿ ತಾವೇ ಮನೆಯ ಹಾಗೂ ಮಳಿಗೆಗಳ ಮಾಹಿತಿ ಸೂಕ್ತ ಫಾರಂನಲ್ಲಿ ನಮೂದಿಸಿ ತೆರಿಗೆ ಸಲ್ಲಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next