ವಿಜಯಪುರ: ಕೋವಿಡ್ ಮೂರನೇ ಅಲೆ ಸೃಷ್ಟಿಯಾಗಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಕಾರಣ ಸಂಭವನೀಯ ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗಾಗಿ ಇಂದಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಧಿಕಾರಿ ಪಿ.ಸುನೀಲಕುಮಾರ ಜಿಲ್ಲೆಯ ಮಕ್ಕಳ ತಜ್ಞ ವೈದ್ಯರು ಹಾಗೂ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬುಧವಾರ ನಗರದಲ್ಲಿರುವ ಬಿದರಿ ಆಶ್ವಿನಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿರುವ ಸಿದ್ಧತೆಗಳ ಪರಿಶೀಲನೆ ನಡೆಸಿ ತಜ್ಞ ವೈದ್ಯರು, ಅಧಿ ಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸೋಂಕಿಗೆ ತುತ್ತಾಗುವ ಬಗ್ಗೆ ಈ ಹಿಂದೆ ತಜ್ಞರು ಸಲಹೆ ನೀಡಿದ್ದಾರೆ. ಹೆಚ್ಚಿನ ಮಕ್ಕಳು ಕೋವಿಡ್ ಸೋಂಕಿಗೆ ತುತ್ತಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಕಾರಣ ವಿಜಯಪುರ ಜಿಲ್ಲೆಯಲ್ಲಿ ಮೂರನೇ ಅಲೆಯ ಅಬ್ಬರ ಕಂಡು ಬರದಂತೆ ಅಗತ್ಯ ಇರುವ ಎಲ್ಲ ಮುನ್ನೆಚ್ಚರಿಕೆ ವಹಿಸಬೇಕಿದೆ. ಒಂದೊಮ್ಮೆ ಸೋಂಕಿನ ಅಬ್ಬರ ಕಂಡು ಬಂದಲ್ಲಿ ತಕ್ಷಣ ತುರ್ತು ಚಿಕಿತ್ಸೆಗೆ ಕ್ರಮ ಕೈಗೊಳ್ಳುವುದಕ್ಕೆ ಅಗತ್ಯ ಇರುವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮಕ್ಕಳ ವೈದ್ಯರು ಹಾಗೂ ಅ ಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಬಿದರಿ ಆಸ್ಪತ್ರೆಯಲ್ಲಿ ಸೂಕ್ತ ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯ, ಹಾಸಿಗೆ ಹಾಗೂ ವೈದ್ಯಕೀಯ ಇತರೆ ಸೌಲಭ್ಯಗಳು, ಆಂಬ್ಯುಲೆನ್ಸ್ ಸೇರಿದಂತೆ ಮಕ್ಕಳ ಚಿಕಿತ್ಸಾ ಸೌಕರ್ಯದ ಬಗ್ಗೆ ಪರಿಶೀಲಿಸಿ, ತಕ್ಷಣದಿಂದಳೇ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು ಮತ್ತು ಚಿಕ್ಕಮಕ್ಕಳ ತಜ್ಞರೊಂದಿಗೂ ಸಹ ಈ ಕುರಿತು ಚರ್ಚಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಸೋಂಕಿತ ಮಕ್ಕಳಿಗೆ ಸಕಾಲದಲ್ಲಿ, ತುರ್ತು ಮತ್ತು ಪರಿಣಾಮಕಾರಿ ಚಿಕಿತ್ಸೆ ಒದಗಿಸಲು ಸಂಬಂ ಧಿಸಿದಂತೆ ಅಧಿ ಕಾರಿಗಳು ಮತ್ತು ವೈದ್ಯರು ಸನ್ನದ್ಧರಾಗಿರಬೇಕು. ಸಕಲ ಸೌಕರ್ಯಗಳೊಂದಿಗೆ ನುರಿತ ಸಿಬ್ಬಂದಿ ಇರುವುದರ ಬಗ್ಗೆ ಖಾತರಿ ಪಡಿಸಿಕೊಳ್ಳುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ| ಶರಣಪ್ಪ ಕಟ್ಟಿ, ಡಾ| ಲಕ್ಕಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿ ಕಾರಿ ಡಾ| ಮಹೇಂದ್ರ ಕಾಪ್ಸೆ, ಚಿಕ್ಕ ಮಕ್ಕಳ ತಜ್ಞ ವೈದ್ಯ ಡಾ| ಎಲ್.ಎಚ್. ಬಿದರಿ ಸೇರಿದಂತೆ ಇತರರು ಇದ್ದರು.