ಧಾರವಾಡ: ಅಕ್ರಮ ಮರಳುಗಾರಿಕೆ ತಡೆಗಟ್ಟಲು ರಾಜ್ಯ ಸರಕಾರ ನೂತನವಾಗಿ ರೂಪಿಸಿರುವ ಹೊಸ ಮರಳು ನೀತಿಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ (ಸುರಕ್ಷಾ ವಲಯ ಹಾಗೂ ಗಣಿ) ಮತ್ತು ಜಿಲ್ಲಾ-ತಾಲೂಕು ಮರಳು ಉಸ್ತುವಾರಿ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮರಳು ನಿಕ್ಷೇಪ ಗುರುತಿಸುವಿಕೆ, ಮೇಲ್ವಿಚಾರಣೆ-ಅನುಮೋದನೆ, ಗುತ್ತಿಗೆ ಅಥವಾ ಪರವಾನಗಿ ಅವಧಿ, ಮರಳು ವಿಲೇವಾರಿ, ಮರಳು ಸಾಗಾಣಿಕೆ ವ್ಯವಸ್ಥೆ, ಆನ್ ಲೈನ್ ಬುಕಿಂಗ್ ಮಾರಾಟ, ಅಕ್ರಮವಾಗಿ ಮರಳು ಸಂಗ್ರಹ-ಸಾಗಾಣಿಕೆಗೆ ದಂಡ ಮತ್ತು ಶಿಕ್ಷೆ ವಿಧಿಸುವ ಕುರಿತು ಹೊಸ ನೀತಿಯಲ್ಲಿ ಸವಿವರವಾಗಿ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ಮರಳು ಬಳಕೆಗೆ ಸಾರ್ವಜನಿಕರಿಗೆ ಅನುಕೂಲವಾಗಲು ಜಿಲ್ಲಾ ಮತ್ತು ತಾಲೂಕು ಮರಳು ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ಸದಸ್ಯರು, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಹೊಸ ಮರಳು ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಕಾರ್ಯೊನ್ಮುಖರಾಗಬೇಕೆಂದರು. ಒಂದು ವಾರದಲ್ಲಿ ಪಿಡಿಒಗಳು ಆಯಾ ಗ್ರಾಪಂ ವ್ಯಾಪ್ತಿಯ ಹಳ್ಳ, ತೊರೆ, ಕೆರೆಗಳನ್ನು ಪರಿಶೀಲಿಸಿ, ಮರಳು ದೊರೆಯುವ ಸ್ಥಳಗಳ ಪಟ್ಟಿಯನ್ನು ತಾಲೂಕು ಮರಳು ಉಸ್ತುವಾರಿ ಸಮಿತಿಗೆ ಸಲ್ಲಿಸಿ ಅದನ್ನು ಜಿಲ್ಲಾ ಸಮಿತಿಗೆ ನೀಡಬೇಕು. ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯು ತಾಲೂಕು ಸಮಿತಿ ಸದಸ್ಯರಿಗೆ ಹಾಗೂ ಎಲ್ಲ ಪಿಡಿಒಗಳಿಗೆ ರಾಜ್ಯ ಮರಳು ನೀತಿ-2020ರ ಕುರಿತು ಅಗತ್ಯ ತರಬೇತಿ ನೀಡಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೆ. ಚಂದ್ರಶೇಖರ್ ಮರಳು ನೀತಿ ಬಗ್ಗೆ ವಿವರಿಸಿದರು. ಉಪಪೊಲೀಸ್ ಅಧೀಕ್ಷಕ ರವಿ ನಾಯಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ, ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ ಇನ್ನಿತರರಿದ್ದರು.
ಜಿಲ್ಲೆಯಲ್ಲಿ ನದಿಗಳಿಲ್ಲ. ಬೆಣ್ಣೆಹಳ್ಳ, ತುಪ್ಪರಿಹಳ್ಳ, ಬೇಡ್ತಿಹಳ್ಳ ಹಾಗೂ ಇವುಗಳನ್ನು ಸೇರುವ ಅನೇಕ ಸಣ್ಣ ಹಳ್ಳಗಳು, ತೊರೆಗಳು ಇವೆ. ಪರಿಸರಕ್ಕೆ ಹಾನಿ ಆಗದಂತೆ ಮರಳನ್ನು ಯಾವ ಯಾವ ಸ್ಥಳಗಳಿಂದ ತೆಗೆಯಬಹುದು ಎಂಬುದನ್ನು ಅಧಿಕಾರಿಗಳು ಪಟ್ಟಿ ಮಾಡಲಿ. ಆಯಾ ತಾಲೂಕಿನ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರು ಮರಳು ಗುಣಮಟ್ಟದ ಬಗ್ಗೆ ಪ್ರಮಾಣ ಪತ್ರ ನೀಡಬೇಕು.
– ಡಾ| ಬಿ.ಸಿ. ಸತೀಶ, ಜಿಪಂ ಸಿಇಒ