ಮುದ್ದೇಬಿಹಾಳ: ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಯಾವುದೇ ರೀತಿ ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ತಾಲೂಕಾಡಳಿತಗಳು ಪೂರಕ ವಾತಾವರಣ ಸೃಷ್ಟಿಸಿಕೊಂಡು ಪೂರ್ವತಯಾರಿಯೊಂದಿಗೆ ಸನ್ನದ್ಧವಾಗಿರಬೇಕು ಎಂದು ವಿಜಯಪುರ ಕಂದಾಯ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದ್ದಾರೆ.
ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳ ವಿವಿಧ ಇಲಾಖೆ ಅಧಿಕಾರಿಗಳ ಪ್ರಕೃತಿ ವಿಕೋಪ ನಿರ್ವಹಣಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಯಿಂದ, ಸಿಡಿಲಿನಿಂದ, ಪ್ರವಾಹದಿಂದ ಹೀಗೆ ಯಾವುದೇ ರೀತಿಯಲ್ಲಾದರೂ ಸಂಭವಿಸಬಹುದಾದ ಪ್ರಕೃತಿ ವಿಕೋಪ ನಿರ್ವಹಿಸುವ ಕುರಿತು ಯೋಜನೆ ಸಿದ್ಧಪಡಿಸಿಟ್ಟುಕೊಳ್ಳಬೇಕು. ಈಗಾಗಲೇ ಮುಂಗಾರು ಮಳೆ ಎದುರಿಸಲು ಜಿಲ್ಲಾಡಳಿತ ಸನ್ನದ್ದ ಸ್ಥಿತಿಯಲ್ಲಿದೆ. ವಿಕೋಪ ಎದುರಿಸಲು ತಕ್ಷಣ ಬೇರೆ ಬೇರೆ ತಂಡಗಳನ್ನು ರಚಿಸಬೇಕು. ಪ್ರತಿಯೊಬ್ಬ ಹಿರಿಯ ಅಧಿಕಾರಿ, ಸ್ಥಳೀಯ ಅಧಿಕಾರಿಗಳ ಮೊಬೈಲ್, ಕಚೇರಿಗಳ ದೂರವಾಣಿ, ಸಹಾಯವಾಣಿ, ಕಂಟ್ರೋಲ್ ರೂಂ ನಂಬರ್‌ಗಳನ್ನು ಆಯಾ ಕಚೇರಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬೇಕು ಎಂದು ಹೇಳಿದರು.
ಜನ, ಜಾನುವಾರುಗಳ ಪ್ರಾಣಹಾನಿ, ಬೆಳೆ ಹಾನಿ, ಜಮೀನು ಹಾನಿ, ಮನೆಗಳ ಹಾನಿ, ವಿದ್ಯುತ್ ಕಂಬಗಳಿಗೆ ತೊಂದರೆ, ಮನೆಗಳಿಗೆ ನೀರು ನುಗ್ಗುವುದು, ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು, ಒಡ್ಡುಗಳು ಒಡೆದು ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುವುದು, ಸಿಡಿಲಿನಿಂದಾಗುವ ಹಾನಿ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಪೂರ್ವತಯಾರಿ ಅಗತ್ಯವಾಗಿದ್ದು ಈ ಬಗ್ಗೆ ಎಲ್ಲರೂ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.
ದಿನನಿತ್ಯವೂ ಮಳೆಮಾಪನ ಕೇಂದ್ರದ ವರದಿಯನ್ನು ಜಿಲ್ಲಾ ಕೇಂದ್ರಕ್ಕೆ ಕಳಿಸಿಕೊಡಬೇಕು. ಮುಂಚಿತವಾಗಿಯೇ ರೈತರ ಜಮೀನುಗಳಲ್ಲಿ ಬೆಳೆದ ಬೆಳೆ ಮಾಹಿತಿ ಸಂಗ್ರಹಿಸಿ ಹಾನಿಗೀಡಾದಲ್ಲಿ ಸೂಕ್ತ ಪರಿಹಾರಕ್ಕೆ ಶಿಫಾರಸು ಮಾಡಬೇಕು. ಜಾನುವಾರುಗಳಿಗೆ ತೊಂದರೆ ಆದಲ್ಲಿ, ಮೇವಿನ ಕೊರತೆ ಕಂಡು ಬಂದಲ್ಲಿ ತಕ್ಷಣ ನಿವಾರಿಸುವಂತಿರಬೇಕು. ಪ್ರವಾಹ ಸಂದರ್ಭ ಬಳಕೆಗಾಗಿ ನುರಿತ ಈಜುಗಾರರು, ಮೀನುಗಾರರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು. ಅಗತ್ಯ ಪ್ರಮಾಣದಲ್ಲಿ ಬೋಟ್ ಸಿದ್ಧತೆಯಲ್ಲಿರಬೇಕು. ಪ್ರವಾಹದಿಂದ ಗ್ರಾಮಗಳ ಜನರ ಸ್ಥಳಾಂತರ ಎದುರಾದಾಗ ಸ್ಥಳೀಯ ಶಾಲೆ, ಸಮುದಾಯ ಭವನಗಳನ್ನು ಸುಸಜ್ಜಿತವಾಗಿರಿಸಬೇಕು. ಇವರಿಗೆಲ್ಲ ಊಟ ತಯಾರಿಸಲು ಅಂಗನವಾಡಿಯವರನ್ನು, ಅಡುಗೆ ಸಿಬ್ಬಂದಿಯನ್ನು, ಆಹಾರ ಪದಾರ್ಥಗಳನ್ನು ಸಿದ್ಧತೆಯಲ್ಲಿಟ್ಟಿರಬೇಕು ಎಂದು ಸೂಚಿಸಿದರು.
ಮುದ್ದೇಬಿಹಾಳ ತಾಲೂಕಿಗೆ ನೋಡಲ್ ಅಧಿಕಾರಿಯನ್ನಾಗಿ ಜಿಲ್ಲಾ ಬಿಸಿಎಂ ಇಲಾಖೆ ಅಧಿಕಾರಿ ಗಂಗಾಧರ ದೊಡಮನಿ (9449064799), ತಾಳಿಕೋಟೆ ತಾಲೂಕಿಗೆ ಜಿಲ್ಲಾ ಸಹಕಾರ ಇಲಾಖೆ ಉಪ ನೋಂದಣಾಧಿಕಾರಿ ಪಿ.ಬಿ. ಕಾಳಗಿ (9448541488) ಅವರನ್ನು ನೇಮಿಸಲಾಗಿದ್ದು ಅಧಿಕಾರಿಗಳು, ಸಾರ್ವಜನಿಕರು ಇವರ ಸಂಪರ್ಕದಲ್ಲಿದ್ದು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಿಳಿಸಿದರು.
ತಹಶೀಲ್ದಾರ್‌ಗಳಾದ ಜಿ.ಎಸ್. ಮಳಗಿ, ಜಿ.ಎಸ್. ಹಿರೇಮಠ, ಅನಿಲಕುಮಾರ ಢವಳಗಿ, ತಾಪಂ ಇಒ ಶಶಿಕಾಂತ ಶಿವಪುರೆ, ಎರಡೂ ತಾಲೂಕುಗಳ ವಿವಿಧ ಇಲಾಖೆ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.