Advertisement

ಮತ್ತೊಂದು ಬಯೋಪಿಕ್‌ ಗೆ ನಾಗಾಭರಣ ಸಿದ್ದತೆ

04:23 AM Jun 13, 2020 | Lakshmi GovindaRaj |

ಕರ್ನಾಟಕ ಸಂಗೀತ ಹಾಡುಗಾರ್ತಿ, ಸಾಂಸ್ಕೃತಿಕ ಹೋರಾಟಗಾರ್ತಿ ಮತ್ತು ವಿದುಷಿಯಾಗಿ ಗುರುತಿಸಿಕೊಂಡಿದ್ದ ಬೆಂಗಳೂರು ನಾಗರತ್ನಮ್ಮ ಅವರ ಜೀವನಾಧಾರಿತ ಚಿತ್ರವನ್ನು ತೆರೆಗೆ ತರಲು ಕನ್ನಡದ ಹಿರಿಯ ರಂಗಕರ್ಮಿ ಮತ್ತು ಚಿತ್ರ ನಿರ್ದೇಶಕ ಟಿ.ಎಸ್‌ ನಾಗಾಭರಣ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ನಾಗರತ್ನಮ್ಮ ಜೀವನವನ್ನು ಆಧರಿಸಿದ ನಾಟಕ ಈಗಾಗಲೇ ಪ್ರದರ್ಶನ ಕಂಡಿದ್ದು, ವಿದ್ಯಾ ಸುಂದರಿ ಬೆಂಗಳೂರು ನಾಗರತ್ಮಮ್ಮ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡು ಚಿತ್ರಕಥೆಯನ್ನು ನಿರ್ದೇಶಕ ಟಿ.ಎಸ್‌ ನಾಗಾಭರಣ ಸಿದ್ಧಪಡುತ್ತಿದ್ದಾರೆ.

Advertisement

ಈ ಕುರಿತಂತೆ ಮಾತನಾಡುವ ನಿರ್ದೇಶಕ ಟಿ.ಎಸ್‌ ನಾಗಾಭರಣ, 2007ರಲ್ಲಿ ವಿ. ಶ್ರೀರಾಮ್‌ ಬರೆದಿರುವ ದೇವದಾಸ್‌ ಮತ್ತು ಸೇಂಟ್‌ ಪುಸ್ತಕದ ಮೂಲಕ ಬೆಂಗಳೂರು ನಾಗರತ್ಮಮ್ಮ ಬಗ್ಗೆ 2009ರಲ್ಲಿ ತಿಳಿದುಕೊಂಡೆ. ಆ ನಂತರ ಅದೇ ವಿಷಯವನ್ನ ಇಟ್ಟುಕೊಂಡು ಕೆಲಸ ಆರಂಭಿಸಿದೆ. ಆಕೆಯ ಜೀವನದ ಬಗ್ಗೆ ಓದಿದ ನಂತರ, ಅದನ್ನು ಚಲನಚಿತ್ರವನ್ನಾಗಿ ಮಾಡಲು ಅದ್ಭುತವಾದ ವಸ್ತುವನ್ನು ಇರುವುದನ್ನು ಕಂಡುಕೊಂಡೆ. ಆದರೆ, ನಿರ್ಮಾಪಕರು ಸಿಗಲಿಲ್ಲ, ಆದ್ದರಿಂದ ನಾಟಕ ಮಾಡಲು ನಿರ್ಧರಿಸಿದೆ. ಅದು ಕಳೆದ ವರ್ಷ 10 ಬಾರಿ ಪ್ರದರ್ಶನ ಕಂಡಿದೆ. ಈ ನಾಟಕ ಬಗ್ಗೆ ಕೆಲ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರ ನಿರ್ದೇಶಿಸುವಂತೆ ಪ್ರೇರೆಪಿಸಿದರು’ ಎನ್ನುತ್ತಾರೆ.

ಕನ್ನಡದಲ್ಲಿ ಬೆಂಗಳೂರು ನಾಗರತ್ನಮ್ಮ ಚಿತ್ರ ಮಾಡಲು ಸಿದ್ಧತೆ ನಡೆಸಿರುವ ಟಿ.ಎಸ್‌ ನಾಗಾಭರಣ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಸದ್ಯ ಅವರು ಸ್ಕ್ರಿಪ್ಟ್‌ನ 13ನೇ ಆವೃತ್ತಿಯ ತಯಾರಿಕೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅದನ್ನು ಮತ್ತಷ್ಟು ಉತ್ತಮಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. 1878ರಲ್ಲಿ ನಂಜನಗೂಡಿನಲ್ಲಿ ಜನಿಸಿದ ನಾಗರತ್ನಮ್ಮ, ಕರ್ನಾಟಕ್‌ ಸಂಗೀತದಲ್ಲಿ ಸಾಕಷ್ಟು ಪ್ರಸಿದ್ದಿ ಪಡೆದಿದ್ದ ಕಲಾವಿದೆ.

ಆಗಿನ ಮದ್ರಾಸ್‌ ಪ್ರಸಿಡೆನ್ಸಿ ವ್ಯಾಪ್ತಿಯಲ್ಲಿ, ಅಂದರೆ ಈಗಿನ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಕರ್ನಾಟಿಕ್‌ ಸಂಗೀತದ ಮೂಲಕ ತನ್ನದೇಯಾದ ಅಭಿಮಾನಿಗಳು ಮತ್ತು ಜನಪ್ರಿಯತೆಯನ್ನು ಸಂಪಾದಿಸಿಕೊಂಡಿದ್ದವರು. ಆಗಿನ ಕಾಲದಲ್ಲಿಯೇ ಮದ್ರಾಸ್‌ ಪ್ರಸಿಡೆನ್ಸಿಗೆ ಆದಾಯ ತೆರಿಗೆ ಪಾವತಿಸಿದ ಮೊದಲ ಮಹಿಳೆ ಎಂಬುದನ್ನು ಓದಿ ತಿಳಿದಿರುವುದಾಗಿ ಹೇಳುತ್ತಾರೆ ಟಿ.ಎಸ್‌ ನಾಗಾಭರಣ.

ನಾಗರತ್ನಮ್ಮ ಕೆಲಸಗಳು ಹಾಗೂ ಆಕೆಯ ಸಾಧನೆಗಳ ಬಗ್ಗೆ ಚಿತ್ರದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆಯಂತೆ. ಸಂಗೀತಗಾರ್ತಿಯಾಗಿ, ಸಾಂಸ್ಕೃತಿಕ ಹೋರಾಟಗಾರ್ತಿ ಮತ್ತು ವಿದುಷಿಯಾಗಿ ಗುರುತಿಸಿಕೊಂಡಿದ್ದ ನಾಗರತ್ನಮ್ಮ 1952ರಲ್ಲಿ ತಿರುವೈಯೂರಿನಲ್ಲಿ ಮೃತಪಡುತ್ತಾರೆ. ಇದೆಲ್ಲವನ್ನೂ ತೆರೆಮೇಲೆ ಕಟ್ಟಿಕೊಡುವ ಯೋಚನೆ ನಾಗಾಭರಣ ಅವರದ್ದು. ಇನ್ನು ಈ ಚಿತ್ರದ ಕಲಾವಿದರ ಬಗ್ಗೆ ಮಾತನಾಡುವ ನಾಗಾಭರಣ, ಕಥೆಯೇ ನನ್ನ ಚಿತ್ರದಲ್ಲಿ ಮೊದಲ ಹೀರೋ ಆಗಿದ್ದು, ಸದ್ಯ ಚಿತ್ರಕಥೆ ಅಂತಿಮ ಹಂತದಲ್ಲಿದೆ. ಆ ನಂತರ ಚಿತ್ರದ ಪಾತ್ರಕ್ಕೆ ಸರಿಹೊಂದುವ ನಟರಿಗಾಗಿ ಹುಡುಕುತ್ತೇನೆ.

Advertisement

ಈ ಚಿತ್ರದ ಬಗ್ಗೆ ನನ್ನ ಮನಸಿನಲ್ಲಿ ನನ್ನದೇಯಾದ ಕೆಲ ಆಯ್ಕೆಗಳಿವೆ. ಚಿತ್ರಕ್ಕೆ ಬದ್ಧರಾಗಿರುವ ಸಂಗೀತ ನಿರ್ದೇಶಕರನ್ನು ಮೊದಲು ಅಂತಿಮಗೊಳಿಸುತ್ತೇನೆ. ಡಿಸೆಂಬರ್ ಅಂತ್ಯದೊಳಗೆ ಪಾತ್ರಾಧಾರಿಗಳ ಆಯ್ಕೆ ಪ್ರಕ್ರಿಯೆಯನ್ನೂ ಪೂರ್ಣಗೊಳಿಸುತ್ತೇವೆ. 2021ರಲ್ಲಿ ಚಿತ್ರೀಕರಣ ಆರಂಭಿಸುವ ಯೋಚನೆಯಿದೆ’ ಎಂದು ಹೇಳಿದ್ದಾರೆ ನಾಗಾಭರಣ. ಇನ್ನು ಇತ್ತೀಚೆಗಷ್ಟೇ, ಬೆನಕ ಥಿಯೇರ್ಟ ಗ್ರೂಫ್ ವೆಬ್‌ ಪೇಜ್‌ ಮತ್ತು ಫೇಸ್‌ ಬುಕ್‌ ಪೇಜ್‌ ಮೂಲಕ ಆನ್‌ ಲೈನ್‌ ನಲ್ಲಿ ಈ ನಾಟಕ ಪ್ರದರ್ಶನ ಕಂಡಿತ್ತು. ಆನ್‌ ಲೈನ್‌ ನಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ ಎನ್ನುತ್ತಾರೆ ನಾಗಾಭರಣ. ವೀಕ್ಷಿಸಬಹುದು ಎಂದು ನಾಗಾಭರಣ ತಿಳಿಸಿದರು.

* ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next