ಉಡುಪಿ: ಜಿಲ್ಲೆಯಲ್ಲಿ ಚುನಾವಣೆ ಹವಾ ಶುರುವಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಫೆ.20ರಂದು ಜಿಲ್ಲೆಗೆ ಬರುತ್ತಿದ್ದಾರೆ. ಉಡುಪಿ ಮತ್ತು ಬೈಂದೂರಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ. 19ರಿಂದ ಫೆ.21ರವರೆಗೂ ರಾಷ್ಟ್ರಾಧ್ಯಕ್ಷರು ಉಡುಪಿ, ಚಿಕ್ಕಮಗಳೂರಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಜಯ ಸಾಧಿಸಲು ರಾಷ್ಟ್ರೀಯ ಅಧ್ಯಕ್ಷರ ಪ್ರವಾಸ ಹೆಚ್ಚು ಸಹಕಾರಿಯಾಗಲಿದೆ. ಫೆ. 20ರ ಬೆಳಗ್ಗೆ 9.30ಕ್ಕೆ ಆದಿಉಡುಪಿ ಹೆಲಿಪ್ಯಾಡ್‌ಗೆ ನಡ್ಡಾ ಅವರು ಆಗಮಿಸಲಿದ್ದಾರೆ. ಅದಲ್ಲಿಂದ ಶ್ರೀ ಕೃಷ್ಣಮಠದ ಭೇಟಿ ನೀಡಿ ದೇವರ ದರ್ಶನ ಪಡೆದು, ಪರ್ಯಾಯ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆಯಲಿದ್ದಾರೆ. ತದನಂತರ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುವ ಜಿಲ್ಲೆಯ ಬೂತ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಅಲ್ಲಿಂದ ಬೈಂದೂರಿಗೆ ತೆರಳಿದ್ದಾರೆ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯ 1,111 ಬೂತ್‌ಗಳ ಅಧ್ಯಕ್ಷರು ಸಹಿತವಾಗಿ 12 ಮಂದಿ ಕಾರ್ಯಕರ್ತರನ್ನು ಒಳಗೊಂಡ ಸಮಿತಿಯ ಎಲ್ಲ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 13,332ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಅನಂತರ ಬೈಂದೂರು ವಿಧಾನಸಭೆ ಕ್ಷೇತ್ರದ ಮುಳ್ಳಿಕಟ್ಟೆಯ ನಗು ಸಿಟಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಮುಖ್ಯ ಭಾಷಣ ಮಾಡಲಿದ್ದಾರೆ. ಸುಮಾರು 20 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಎರಡು ಕಾರ್ಯಕ್ರಮಗಳ ಯಶಸ್ವಿಗೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಹಾಗೂ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.
ಬೈಂದೂರು ಕ್ಷೇತ್ರದಿಂದ ಶೃಂಗೇರಿಗೆ ಪ್ರಯಾಣ ಬೆಳಸಲಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಇನ್ನೊಂದು ತಿಂಗಳಲ್ಲಿ ಐದು ರಥಯಾತ್ರೆಗಳು ಜಿಲ್ಲೆಗೆ ಬರಲಿದೆ. ಇದರಲ್ಲಿ ವಿಜಯ ಸಂಕಲ್ಪ ರಥಯಾತ್ರೆ ಪ್ರಮುಖವಾಗಿದೆ. ಒಂದೊಂದು ಮಂಡಲಗಳಲ್ಲೂ ವಿವಿಧ ಮೋರ್ಚಾಗಳ ಸಮಾವೇಶವೂ ನಡೆಯಲಿದೆ. ಯಾವುದೇ ಕ್ಷೇತ್ರದಲ್ಲೂ ಅಭ್ಯರ್ಥಿಗಳ ಘೋಷಣೆ ಸದ್ಯಕ್ಕೆ ಇಲ್ಲ. ಪಕ್ಷದ ವರಿಷ್ಠರು ಅಂತಿಮ ನಿರ್ಧಾರವನ್ನು ಚುನಾವಣೆ ಘೋಷಣೆಯ ಅನಂತರವೇ ತಿಳಿಸಲಿದ್ದಾರೆ ಎಂದು ಹೇಳಿದರು.
ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷರೂ ಆದ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ. ರಾಘವೇಂದ್ರ ಕಿಣಿ, ಸಹ ವಕ್ತಾರರಾದ ಪ್ರತಾಪ್‌ಶೆಟ್ಟಿ ಚೇರ್ಕಾಡಿ, ಶಿವಕುಮಾರ್ ಅಂಬಲಪಾಡಿ, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.