Advertisement

ಹಡಿಲು ಭೂಮಿಯಲ್ಲಿ ಕೃಷಿಗೆ ಸಿದ್ಧತೆ; ಗುತ್ತಿಗೆ ಆಧಾರದ ಬೇಸಾಯಕ್ಕೆ ಬೇಡಿಕೆ ಹೆಚ್ಚಳ

03:48 PM Jun 10, 2024 | Team Udayavani |

ಕೋಟ: ಈ ಬಾರಿ ವಾಡಿಕೆಯಂತೆ ಜೂನ್‌ ಆರಂಭದಲ್ಲೇ ಮುಂಗಾರು ಮಳೆಯ ಲಕ್ಷಣ ಕಾಣಿಸಿದ್ದು ವರುಣ ದೇವನ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಹೀಗಾಗಿ ಭತ್ತ ನಾಟಿಯ ಮೂಲಕ ಭೂಮಿ ತಾಯಿಯ ಒಡಲನ್ನು ಹಸಿರಾಗಿಸುವ ನಿಟ್ಟಿನಲ್ಲಿ ನೇಜಿ ಸಿದ್ಧಪಡಿಸುವ ಕಾಯಕದಲ್ಲಿ ರೈತರು ತಲ್ಲೀನನಾಗಿದ್ದಾರೆ.

Advertisement

ಪ್ರಸ್ತುತ ಸಾಂಪ್ರದಾಯಿಕ ವಿಧಾನದ ಕೃಷಿ ಚಟುವಟಿಕೆ ಎಲ್ಲ ಕಡೆ ಮಾಯವಾಗಿದ್ದು, ಯಾಂತ್ರೀಕೃತ ಚಾಪೆ ನೇಜಿಯನ್ನು
ಬಹುತೇಕರು ಅವಲಂಬಿಸಿದ್ದಾರೆ ಹಾಗೂ ಸ್ವಂತ ಶಕ್ತಿಯನ್ನು ಬಳಸಿ ಕೃಷಿ ಕಾಯಕ ನಡೆಸುವ ರೈತರ ಸಂಖ್ಯೆ ಕೂಡ ಕಡಿಮೆಯಾಗಿದ್ದು, ಗುತ್ತಿಗೆ ಆಧಾರದ ಕೃಷಿ ಚಟುವಟಿಕೆಗೆ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಕೋಟ ಹೋಬಳಿಯ ಶಿರಿಯಾರದ ಸೋಮ ಪೂಜಾರಿ ಹಾಗೂ ಪಡುಕರೆಯ ರಮೇಶ್‌ ಪೂಜಾರಿ, ರತ್ನಾಕರ ಹೊಳ್ಳರ ತಂಡ ಪ್ರತಿ ವರ್ಷ ಸಾವಿರಾರು ಎಕರೆ ಕೃಷಿಭೂಮಿ ಯಲ್ಲಿ ಗುತ್ತಿಗೆ ಆಧಾರದಲ್ಲಿ ಚಾಪೆ ನೇಜಿ ಮಾಡಿ ಕೊಡುತ್ತಿದೆ. ಹಾಗೂ ಅವರಿಗಿರುವ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಕೃಷಿಯಾಸಕ್ತರ ಪಾಲಿನ ಮಿತ್ರರು ಕೆಲವು ರೈತರಿಗೆ ಹಿರಿಯರು ಮಾಡಿಟ್ಟ ಕೃಷಿ ಜಮೀನನ್ನು ಹಡಿಲು ಹಾಕಬಾರದು ಎಂಬ ಬಯಕೆ ಇರುತ್ತದೆ. ಆದರೆ, ತಾವೇ ಗದ್ದೆಗಿಳಿದು ಕೆಲಸ ಮಾಡುವುದು ಕಷ್ಟ ಎಂಬ ಕಾರ ಣಕ್ಕೆ ಕೃಷಿಯಿಂದಲೇ ಹಿಂದೆ ಸರಿಯುತ್ತಾರೆ. ಇಂತಹ ಆಸಕ್ತ ರೈತರ ಪಾಲಿಗೆ ಕೃಷಿ ಗುತ್ತಿಗೆದಾರರು ವರವಾಗಿದ್ದಾರೆ.

ಯಾಂತ್ರೀಕೃತ ಕೃಷಿಗೆ ನವ ಉದ್ಯಮದ ಸ್ಪರ್ಶ ನೀಡಿದ ಸೋಮ ಪೂಜಾರಿ ಅವರು ಕಾಪುವಿನಿಂದ ಬೈಂದೂರು ವರೆಗಿನ ಸುಮಾರು 1 ಸಾವಿರ ಎಕರೆ ಕೃಷಿ ಭೂಮಿಯಲ್ಲಿ ಸಮಗ್ರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ರೈತನಿಗೆ ಯಾವುದೇ ಶ್ರಮವಿಲ್ಲದಂತೆ ನೇಜಿ ಬೆಳೆಯುವುದರಿಂದ ಹಿಡಿದು ಉಳುಮೆ, ನಾಟಿ, ಕಟಾವು ಮುಂತಾದ ಸಮಗ್ರ ಚಟುವಟಿಕೆಯನ್ನು ನಿಭಾಯಿಸುತ್ತಾರೆ. ಈ ಬಾರಿ 800 ಎಕರೆ ಯಲ್ಲಿ ಭತ್ತದ ನಾಟಿಗೆ ಇವರು ಸಿದ್ಧತೆ ನಡೆಸಿದ್ದಾರೆ.

Advertisement

ಮಳೆ ಆತಂಕವೂ ಇಲ್ಲ ನೇಜಿ ನರ್ಸರಿ ಇದೆ
ಮುಂಗಾರು ಮಳೆ ವಿಳಂಬದಿಂದ ಕೃಷಿಗೆ ನೀರಿನ ಕೊರತೆ ಉಂಟಾಗಿ ಭತ್ತ ನಾಟಿಗೆ ನೇಜಿ ತಯಾರಿಗೆ ಪ್ರತಿ ವರ್ಷ ಹಿನ್ನಡೆಯಾಗುತ್ತದೆ ಹಾಗೂ ಕೆಲವು ಕಡೆಗಳಲ್ಲಿ ಮಳೆ ಆರಂಭವಾಗುತ್ತಲೇ ನಾಟಿ ಮಾಡಬೇಕಾದ ಅನಿವಾರ್ಯತೆ ಇರುತ್ತದೆ.
ಆದ್ದರಿಂದ ಮೈಕ್ರೋ ಸ್ಪ್ರಿಂಕ್ಲರ್‌ ಬಳಸಿಪ್ರತಿ ನಿತ್ಯ ನೇಜಿಗೆ ನೀರು ಹಾಗೂ ಪೌಷ್ಟಿಕಾಂಶ ನೀಡಿ ಮಳೆ ಆರಂಭಕ್ಕೆ ಮುನ್ನವೇ ನೇಜಿ ತಯಾರಿಸುವ ನೇಜಿ ನರ್ಸರಿ ವಿಧಾನವನ್ನು ಕಳೆದೆರಡು ವರ್ಷದಿಂದ ಪಡುಕರೆಯ ರಮೇಶ್‌ ಪೂಜಾರಿ, ರತ್ನಾಕರ ಹೊಳ್ಳ ಪರಿಚಯಿಸಿದ್ದು, ಈ ಬಾರಿ ಕೂಡ 16ಸಾವಿರ ಮ್ಯಾಟ್‌ ನೇಜಿ ಈ ವಿಧಾನದಲ್ಲಿ ನಾಟಿಗೆ ಸಿದ್ಧಗೊಂಡಿದೆ. 250 ಎಕ್ರೆಯಷ್ಟು ಸಮಗ್ರ ಗುತ್ತಿಗೆ ಆಧಾರದ ಕೃಷಿಗೂ ಇವರಿಗೆ ಬೇಡಿಕೆ ಇದೆ.

800 ಎಕರೆಯಷ್ಟು ನಾಟಿ
ರೈತರಿಗೆ ಕೃಷಿ ಬಗ್ಗೆ ಸಂಪೂರ್ಣ ನಿರಾಸಕ್ತಿ ಇಲ್ಲ. ಆದರೆ ಸ್ವಂತ ಶ್ರಮದಲ್ಲಿ ಕೆಲಸ ಮಾಡುವವರ ಸಂಖ್ಯೆ ಕಡಿಮೆ ಇದೆ. ನಮಗೆ ಪ್ರತಿ ವರ್ಷ ಸಾವಿರಕ್ಕೂ ಅಧಿಕ ಎಕರೆ ನಾಟಿಗೆ ಬೇಡಿಕೆ ಬರುತ್ತದೆ. ಅಂದಾಜು 800 ಎಕರೆಯಷ್ಟು ನಾಟಿ ಮಾಡಿಕೊಡುತ್ತೇವೆ.
*ಸೋಮ ಪೂಜಾರಿ,
ಶಿರಿಯಾರ, ಕೃಷಿ ಗುತ್ತಿಗೆದಾರರು

ನೇಜಿ ನರ್ಸರಿಗೆ ಬೇಡಿಕೆ
ಮುಂಗಾರು ಮಳೆ ವಿಳಂಬದಿಂದ ಕೃಷಿಗೆ ನೀರಿನ ಕೊರತೆ ಉಂಟಾಗಿ ಆರಂಭದಲ್ಲೇ ನಾಟಿ ಮಾಡಬೇಕಾದ ಗದ್ದೆಗಳಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ನಾವು ಆರಂಭಿಸಿದ ನೇಜಿ ನರ್ಸರಿಗೆ ಭಾರೀ ಬೇಡಿಕೆ ಇದ್ದು 500 ಎಕರೆಯಷ್ಟು ನೇಜಿ ಹಾಗೂ ಸಮಗ್ರ ನಾಟಿಗೆ ಬೇಡಿಕೆ ಇದೆ.
*ರಮೇಶ್‌ ಪೂಜಾರಿ, ಪಡುಕರೆ, ಕೃಷಿಕ

ಬೀಜ ದರ ಹೆಚ್ಚಳದಿಂದ ದುಬಾರಿ
ಈ ಬಾರಿ ಬಿತ್ತನೆ ಬೀಜದ ದರ 10 ರೂ ತನಕ ಏರಿಕೆಯಾಗಿದೆ. ಹೀಗಾಗಿ ಈ ಹಿಂದೆ ಚಾಪೆ ಒಂದಕ್ಕೆ 100 ರೂ. ನಲ್ಲಿ ನಡೆಯುತ್ತಿದ್ದ ನಾಟಿ ಈ ಬಾರಿ ಕೊಂಚ ದುಬಾರಿಯಾಗಿದ್ದು 110ರಿಂದ 120 ರೂ. ನಿಗದಿಪಡಿಸಲಾಗಿದೆ.

*ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next