Advertisement

ಮುಂಗಾರು ಬಿರುಸು: ಭತ್ತ ಕೃಷಿಗೆ ಮುಂದಾಗುತ್ತಿರುವ ರೈತರು

03:06 PM Jun 10, 2024 | Team Udayavani |

ಮಹಾನಗರ: ಮುಂಗಾರು ಕರಾವಳಿಯನ್ನು ಪ್ರವೇಶಿಸಿದ್ದರೂ ನಿರೀಕ್ಷಿತ ರೀತಿಯಲ್ಲಿ ಮಳೆ ಸುರಿದಿರಲಿಲ್ಲ. ಕಳೆದೆರಡು ದಿನಗಳಲ್ಲಿ ಮಳೆಯಲ್ಲಿ ಬಿರುಸು ಕಾಣಿಸಿಕೊಂಡಿದ್ದು, ಇದೇ ರೀತಿ ಮುಂದುವರಿದರೆ ವಾರದಲ್ಲಿ ಭತ್ತ ಬೇಸಾಯ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ . ಮಳೆಯ ನಿರೀಕ್ಷೆಯಲ್ಲಿದ್ದ ಮಂಗಳೂರು ತಾಲೂಕಿನ ಗ್ರಾಮಾಂತರವೂ ಸಹಿತ ಮೂಡುಬಿದಿರೆ, ಮೂಲ್ಕಿ, ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ರೈತರ ಮೊಗದಲ್ಲಿ ಮುಂಗಾರಿನ ಬಿರುಸು ಹರ್ಷ ತಂದಿದೆ.

Advertisement

ಬಹುತೇಕ ಕೃಷಿಕರು ಮಳೆಯಾಶ್ರಿತ ಭತ್ತ ಬೇಸಾಯ ಮಾಡುವುದರಿಂದ ವಿಳಂಬವಾಗಿತ್ತು. ಈಗಾಗಲೇ ಒಂದು ಹಂತದಲ್ಲಿ ಉಳುಮೆ ಮಾಡಿ ಸಿದ್ಧತೆ ಮಾಡಿದ್ದ ರೈತರು ಉತ್ತಮ ಮಳೆ ನಿರೀಕ್ಷೆಯಲ್ಲಿದ್ದರು. ಇದೀಗ ಮಳೆ ಸುರಿಯಲು ಆರಂಭವಾಗಿರುವುದರಿಂದ ಕೆಲವರು ಚಾಪೆ ನೇಜಿ ಕೆಲಸಕ್ಕೆ ಸಿದ್ಧತೆ ಮಾಡುತ್ತಿದ್ದಾರೆ. ಗದ್ದೆ ಉಳುಮೆ ಕೂಡಾ ಇನ್ನೆರಡು ದಿನಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಕೂಡಾ ಮುಂಗಾರು ವಿಳಂಬವಾಗಿ ಭತ್ತ ಬೇಸಾಯ ಒಂದು ತಿಂಗಳು ತಡವಾಗಿ ಆರಂಭವಾಗಿತ್ತು.

ಈ ಬಾರಿ ಮಂಗಳೂರು ಗ್ರಾಮಾಂತರ ಮತ್ತು ಇತರ ತಾಲೂಕುಗಳಲ್ಲಿ ಸೇರಿ ಒಟ್ಟು 5,700 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಮಂಗಳೂರು ತಾಲೂಕಿನಲ್ಲಿ 1,500 ಹೆಕ್ಟೇರ್‌, ಮೂಡುಬಿದಿರೆ ತಾಲೂಕಿನಲ್ಲಿ 1,650, ಮೂಲ್ಕಿ 1,700 ಮತ್ತು ಉಳ್ಳಾಲದಲ್ಲಿ 850 ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ಹೊಂದಲಾಗಿದೆ. ಕಳೆದ ಬಾರಿಯಷ್ಟೇ ಗುರಿಯಿದೆ.

181.5 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಣೆ
ನಾಲ್ಕು ತಾಲೂಕಿನಲ್ಲಿ ತಾಲೂಕಿಕುಗಳಲ್ಲಿ ಒಟ್ಟು 181.5 ಕ್ವಿಂಟಾಲ್‌ ಭತ್ತದ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಜಯ ತಳಿ 11.25 ಕ್ವಿಂಟಾಲ್‌, ಜ್ಯೋತಿ 8.5 ಕ್ವಿಂಟಾಲ್‌., ಎಂಒ4 112 ಕ್ವಿಂಟಾಲ್‌. ಮತ್ತು ಸಹ್ಯಾದ್ರಿ ಕೆಂಪುಮುಖಿ ತಳಿ 49.75 ಕ್ವಿಂಟಾಲ್‌.
ವಿತರಿಸಲಾಗಿದೆ. ಸದ್ಯ ಎಂಒ4 ಹೊರತುಪಡಿಸಿ ಉಳಿದ ತಳಿಗಳು ಸೇರಿ ಒಟ್ಟು 133.75 ಟನ್‌ ದಾಸ್ತಾನು ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಸಗೊಬ್ಬರ ವಿತರಣೆ
ಜಿಲ್ಲೆಯಲ್ಲಿ ಇದು ವರೆಗೆ 6,379.68 ಟನ್‌ ರಸಗೊಬ್ಬರ ರೈತರಿಗೆ ವಿತರಿಸಲಾಗಿದೆ. ಪ್ರಸ್ತುತ 7959.96 ಟನ್‌ ರಸಗೊಬ್ಬರ ದಾಸ್ತಾನು ಇದೆ. ಯೂರಿಯಾ, ಡಿಎಪಿ, ಒಂಒಪಿ, ಎನ್‌ಪಿಕೆ, ಎಸ್‌ಎಸ್‌ಪಿ ರಸಗೊಬ್ಬರಗಳ ಮುಂಗಾರಿನ ಬೇಡಿಕೆ 22,565 ಟನ್‌.

Advertisement

ಸಹ್ಯಾದ್ರಿ ಕೆಂಪುಮುಖ್ತಿ ಹೆಚ್ಚು ವಿತರಣೆ
ಪ್ರತಿ ವರ್ಷ ಒಂಒ4 ಭತ್ತದ ತಳಿಯನ್ನು ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲಾಗುತ್ತಿತ್ತು. ಈ ಬಾರಿ ಎಂಒ4 ಬದಲು ಸಹ್ಯಾದ್ರಿ ಕೆಂಪುಮುಖ್ತಿ ತಳಿಯನ್ನು ಕೃಷಿ ಇಲಾಖೆ ಪರಿಚಯಿಸಿದೆ. ಅದರಂತೆ ಹೆಚ್ಚಿನ ಪ್ರಮಾಣದಲ್ಲಿ ಕೆಂಪುಮುಖ್ತಿಯ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಆದರೆ ರೈತರು ಒಂಒ4 ತಳಿ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಈ ಬಾರಿ ಕೃಷಿ ಇಲಾಖೆ 335 ಕ್ವಿಂ. ಎಂಒ4ಗೆ ಬೇಡಿಕೆ ಇಟ್ಟಿದ್ದರೂ, ಸರಕಾರದಿಂದ ಇಲ್ಲಿಯ ವರೆಗೆ 112 ಕ್ವಿಂ ಮಾತ್ರ ಪೂರೈಕೆಯಾಗಿದೆ. ಕೆಂಪುಮುಖ್ತಿ 73.25 ಕ್ವಿಂ. ಬೇಡಿಕೆ ಇಡಲಾಗಿತ್ತು. ಆದರೆ ಇದು 158.25 ಕ್ವಿಂ. ಪೂರೈಕೆಯಾಗಿದೆ. ಪ್ರಸ್ತುತ 108.5 ಕ್ವಿಂ. ದಾಸ್ತಾನಿದೆ.

ವಾರದಲ್ಲಿ ಕೃಷಿ ಚಟುವಟಿಕೆ ಬಿರುಸು
ಭತ್ತ ಕೃಷಿಕರು ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜಗಳನ್ನು ಪಡೆಯುತ್ತಿದ್ದಾರೆ. ಮುಂಗಾರು ಕರಾವಳಿಗೆ ಪ್ರವೇಶಿಸಿ, ಮಳೆ ತುಸು ಬಿರುಸು ಪಡೆದಿದ್ದು, ಇನ್ನೊಂದು ವಾರದಲ್ಲಿ ಪೂರ್ಣ ಪ್ರಮಾಣದ ಕೃಷಿ ಚಟುವಟಿಕೆ ಆರಂಭವಾಗುವ ನಿರೀಕ್ಷೆಯಿದೆ.
*ಡಾ| ವೀಣಾ ರೈ, ಸಹಾಯಕ ನಿರ್ದೇಶಕರು,
ಕೃಷಿ ಇಲಾಖೆ ಮಂಗಳೂರು

ಮಳೆ ಬಿರುಸು ಸಹಕಾರಿ
ಮುಂಗಾರಿನ ಬಿರುಸು ಆರಂಭವಾಗಿದ್ದು, ಭತ್ತ ಬೇಸಾಯ ಚಟುವಟಿಕೆ ಆರಂಭಿಸಲು ಸಹಕಾರಿಯಾಗಿದೆ. ಕಳೆದೆರಡು ದಿನಗಳಿಂದ
ಮಳೆಯಾಗುತ್ತಿರುವುದರಿಂದ ಗದ್ದೆಗಳಲ್ಲಿ ನೀರು ನಿಲ್ಲಲು ಆರಂಭವಾಗಿದೆ. ಇನ್ನೂ ಕೆಲವು ದಿನಗಳ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದೇವೆ.
*ಮನೋಹರ್‌ ಶೆಟ್ಟಿ,
ಕುಪ್ಪೆಪದವು, ಕೃಷಿಕರು

*ಭರತ್‌ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next