Advertisement

ರಾ.ಹೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

12:45 AM Jun 13, 2024 | Team Udayavani |

ಉಡುಪಿ: ಜಿಲ್ಲೆಯ ರಾ.ಹೆ. ಕಾಮಗಾರಿಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ, ಹೆಚ್ಚು ಕಾರ್ಮಿ ಕರನ್ನು ನಿಯೋಜಿಸಿ ತ್ವರಿತವಾಗಿ ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾ.ಹೆ. ಕಾಮಗಾರಿಗಳ ಪ್ರಗತಿ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ಸಂತೆಕಟ್ಟೆ ಓವರ್‌ ಪಾಸ್‌, ಇಂದ್ರಾಳಿ ಮೇಲ್ಸೇತುವೆ, ಕರಾವಳಿ ಜಂಕ್ಷನ್‌ನಿಂದ ಮಲ್ಪೆ ರಸ್ತೆ, ಪರ್ಕಳ- ಆಗುಂಬೆ ವರೆಗಿನ ಹೆದ್ದಾರಿ ಕಾಮಗಾರಿ ಮಂದಗತಿಯಲ್ಲಿದ್ದು ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿವೆ ಎಂಬ ದೂರುಗಳು ಪ್ರತಿನಿತ್ಯ ಕೇಳಿಬರುತ್ತಿವೆ ಎಂದರು.

ಸಂತೆಕಟ್ಟೆ ಬಳಿ ರಸ್ತೆ ಕಾಮಗಾರಿ ದಿನವೊಂದಕ್ಕೆ 10 ಮೀಟರ್‌ ಕೂಡ ಆಗುತ್ತಿಲ್ಲ. ಈ ರೀತಿ ಮಾಡಿದರೆ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಈ ಬಗ್ಗೆ ಎಂಜಿನಿಯರ್‌ಗಳು ನಿಗಾವಹಿಸಬೇಕು. ಕರಾವಳಿ ಬೈಪಾಸ್‌ನಿಂದ ಮಲ್ಪೆ ವರೆಗಿನ ರಾ.ಹೆ. ನಿರ್ಮಾಣಕ್ಕೆ ಆಗತ್ಯವಿರುವ ಭೂಮಿ ಸ್ವಾಧೀನ ಪ್ರಕ್ರಿಯೆ ಆದ್ಯತೆ ಮೇಲೆ ಕೈಗೊಳ್ಳಬೇಕು. ಭೂಮಿಯ ಮಾಲಕರಿಗೆ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಪರಿಹಾರ ಒದಗಿಸಿ ಸಾಮಾಜಿಕ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಇಂದ್ರಾಳಿ ಮೇಲ್ಸೇತುವೆ ಕಾಮ ಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ. ಇದನ್ನು ಶೀಘ್ರ‌ ಮುಗಿಸಿ. ಪರ್ಕಳದಲ್ಲಿ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿರುವ ಪ್ರಕರಣ ತ್ವರಿತವಾಗಿ ಇತ್ಯರ್ಥಪಡಿಸಲು, ಸಾಣೂರು-ಬಿಕರ್ನಕಟ್ಟೆ ರಸ್ತೆ ಅಭಿವೃದ್ಧಿಗೆ ಬೇಕಿರುವ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ, ಮರಗಳನ್ನು ಕಡಿ ಯಲು ಅರಣ್ಯ ಇಲಾಖೆ ಅನುಮತಿ ಪಡೆದು ಕೆಲಸ ಪ್ರಾರಂಭಿಸಲು ಸೂಚಿಸಿದರು.

ಶಾಸಕ ಯಶ್‌ಪಾಲ್‌ ಸುವರ್ಣ ಮತ್ತು ಗುರ್ಮೆ ಸುರೇಶ್‌ ಶೆಟ್ಟಿ ಅವರು ಮಾತನಾಡಿ, ಬ್ರಹ್ಮಾವರ ಪೇಟೆ, ಮಲ್ಪೆ-ಆದಿಉಡುಪಿ ರಸ್ತೆ, ಅಂಬಲಪಾಡಿ ಜಂಕ್ಷನ್‌ ಕಾಮಗಾರಿಯ ಬಗ್ಗೆ, ಪಡುಬಿದ್ರಿ, ಕಟಪಾಡಿ ಭಾಗದಲ್ಲಿ ಅಪಘಾತ ತಡೆಗೆ ಬ್ಯಾರಿಕೇಡ್‌, ರಿಫ್ಲೆಕ್ಟರ್‌ ಅಳವಡಿಕೆ. ಸುಜ್ಲಾನ್‌ ಗೇಟ್‌ ಬಳಿ ಸರ್ವಿಸ್‌ ರಸ್ತೆ, ರಾ.ಹೆ. ಚರಂಡಿ ನಿರ್ವಹಣೆ ಬಗ್ಗೆ ಗಮನ ಸೆಳೆದರು.

Advertisement

ಡಿಸಿ ಡಾ| ಕೆ. ವಿದ್ಯಾಕುಮಾರಿ, ಎಸ್‌ಪಿ ಡಾ| ಅರುಣ್‌ ಕೆ., ಸಹಾಯಕ ಕಮಿಷನರ್‌ ರಶ್ಮಿ, ನಗರಸಭಾ ಸದಸ್ಯರಾದ ಗಿರೀಶ್‌ ಅಂಚನ್‌, ಸುಂದರ್‌ ಕಲ್ಮಾಡಿ ಉಪಸ್ಥಿತರಿದ್ದರು.

ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಪರಿಶೀಲನೆ
ಸಭೆಯ ಅನಂತರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಎಸ್‌ಪಿ ಡಾ| ಕೆ. ಅರುಣ್‌ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next