Advertisement

ಮಟ್ಟು: ಭತ್ತದ ಕೃಷಿಗೆ ಒಗ್ಗೂಡುವ ಅಪರೂಪದ ಕೂಡು ಕುಟುಂಬ

03:58 PM Jun 10, 2024 | Team Udayavani |

ಕಟಪಾಡಿ: ಕೋಟೆ ಗ್ರಾಮದ ಮಟ್ಟು ಆಳಿಂಜೆಯ ಗದ್ದೆಯಲ್ಲಿ ಎನಿಮೇಷನ್‌ ಸ್ಟುಡಿಯೋದ ಇಬ್ಬರು ಯುವಕರು, ಕಂಪೆನಿಯೊಂದರ ಎಚ್‌.ಆರ್‌., ಪ್ರಾಥಮಿಕ ಆರೋಗ್ಯ ಕೇಂದ್ರವೊಂದರ ಕಣ್ಣಿನ ಟೆಕ್ನೀಷಿಯನ್‌, ಸಿವಿಲ್‌ ಎಂಜಿನಿಯರ್‌,
ಕಾರ್‌ ಮೆಕ್ಯಾನಿಕ್‌, ಟೈಲರ್‌, ಚಾಲಕ, ಬ್ಯೂಟೀಷಿಯನ್‌, ವಿದ್ಯಾರ್ಥಿ, ಮಕ್ಕಳು ಜತೆ ಯಾಗಿ ತಮ್ಮ ಅಜ್ಜನ ಗದ್ದೆಯಲ್ಲಿ ಕೃಷಿ
ಚಟುವಟಿಕೆಯಲ್ಲಿ ನಿರತರಾಗಿರುವುದು ಕಂಡು ಬಂದಿತ್ತು.ಇವರೆಲ್ಲರೂ ಮಟ್ಟು ಆಳಿಂಜೆಯ ದಿ| ಮಟ್ಟು ಚಿನ್ನು ಆರ್‌. ಅಂಚನ್‌, ವನಜಾ ಚಿನ್ನು ಅಂಚನ್‌ ದಂಪತಿಯ ಅವಿಭಕ್ತ ಕುಟುಂಬದ ಸದಸ್ಯರಾಗಿದ್ದು, ಕುಟುಂಬದ ಗದ್ದೆಯಲ್ಲಿ ಭತ್ತದ ಕೃಷಿಗೆ ಒಂದೆಡೆ ಕಲೆತಿದ್ದಾರೆ.

Advertisement

ಕೃಷಿ ಹಬ್ಬಕ್ಕೆ ಕಲೆತ ಅವಿಭಕ್ತ ಕುಟುಂಬ
ಹಿರಿಯ ಕೃಷಿಕರಾಗಿದ್ದ ದಿ| ಮಟ್ಟು ಚಿನ್ನು ಆರ್‌. ಅಂಚನ್‌ ಅವರು ಹಾಕಿ ಕೊಟ್ಟ ಸಂಪ್ರದಾಯದಂತೆ ತನ್ನ 7 ಪುತ್ರರು, ಪುತ್ರಿಯ ಮನೆಯ ಸಮಸ್ತ ಮಂದಿ ಒಟ್ಟಾಗಿ ಒಂದು ದಿನ ತಮ್ಮ ಒಂದು ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ನೇಜಿ ನಾಟಿ ಮಾಡುವುದು ಸಂಪ್ರದಾಯವಾಗಿದೆ.

ಉದ್ಯೋಗ ನಿಮಿತ್ತ ವಿವಿಧೆಡೆ ತೆರಳಿ ಸ್ವಂತ ಮನೆ ನಿರ್ಮಿಸಿಕೊಂಡಿದ್ದರೂ ಕುಟುಂಬ ಸದಸ್ಯರು ಮದುವೆ, ಹುಟ್ಟುಹಬ್ಬ, ಹಿರಿಯರ ಸಮಾರಂಭ ಸಹಿತ ಇತರ ಸಮಾರಂಭದ ನೆಪದಲ್ಲಿ ಒಟ್ಟಾಗುವಾಗಲೂ ಸಂಕಷ್ಟ ಪಡುವ ಪ್ರಸ್ತುತ ಕಾಲ ಘಟ್ಟದಲ್ಲಿ ಸಾಂಪ್ರದಾಯಿಕ ಕೃಷಿ ಚಟುವಟಿಕೆ ನಡೆಸಲು ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಸಮಚಿತ್ತರಾಗಿ ಗದ್ದೆಯಲ್ಲಿ ಒಂದಾ ಗುವುದು ವಿಶೇಷ ಸಂಪ್ರದಾಯವಾಗಿದೆ.

ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಗೆ ಮುಕ್ತಿ
ಈ ಬಾರಿ ಕುಟುಂಬದ ಹಿರಿಯ, ಪ್ರಗತಿಪರ ಕೃಷಿಕ ಲಕ್ಷ್ಮಣ್‌ ಮಟ್ಟು ಮುಂದಾಳತ್ವದಲ್ಲಿ ಹಸನುಗೊಳಿಸಿದ ಗದ್ದೆಯಲ್ಲಿ ಸಿದ್ಧಪಡಿಸಲಾದ ಚಾಪೆ ನೇಜಿ (ಎಂಒ4 ತಳಿ)ಯನ್ನು ನೆಡುವ ಮೂಲಕ ಸಂಪ್ರದಾಯ ಮುಂದುವರಿಸಿದ್ದಾರೆ.

Advertisement

ಈ ಕುಟುಂಬದ ಸದಸ್ಯರು ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರೂ ಈ ಕೃಷಿ ಕೆಲಸಕ್ಕೆ ಕೂಡು ಕುಟುಂಬದಂತೆ ಒಗ್ಗೂಡಿಕೊಂಡು ಸುಮಾರು 25 ಮಂದಿ ಜತೆಗೂಡಿ ಬೇಸಾಯ ಕೆಲಸ ನಡೆಸಿದ್ದರು. ಕೃಷಿ ಕೂಲಿಯಾಳುಗಳ ಸಹಾಯ ಇಲ್ಲದೇ, ಉಳುಮೆ ಮಾಡಿ ಹದಗೊಳಿಸಿದ 1 ಎಕರೆ ಗದ್ದೆಯಲ್ಲಿ 12 ದಿನದ ಚಾಪೆ ನೇಜಿಯನ್ನು ಬಳಸಿಕೊಂಡು ನೇಜಿ ನಾಟಿ ಕಾರ್ಯ ಪೂರೈಸಿದ್ದಾರೆ.

3 ತಿಂಗಳ ಅನಂತರ ಕಟಾವು ನಡೆಯಲಿದ್ದು, ಸುಮಾರು 12 ಟನ್‌ ಭತ್ತ ಪಡೆಯುವ ನಿರೀಕ್ಷೆ ಇರಿಸಲಾಗಿದೆ. ಇಲ್ಲಿ ಮುಂದಿನ ಪೀಳಿಗೆಗೆ ಕೃಷಿ ಪರಿಚಯದ ಜತೆಗೆ ಕೃಷಿ ಕೂಲಿಯಾಳುಗಳ ಸಮಸ್ಯೆಗೆ ಪರಿಹಾರ, ಸ್ವಂತ ದುಡಿಮೆಯಿಂದ ಅಧಿಕ ಆದಾಯ, ಮುಂದಿನ ಯುವ ಪೀಳಿಗೆಯೂ ಕೃಷಿ ಕಾಯಕ ಮುಂದುವರಿಸುವ ಭರವಸೆ ಇಲ್ಲಿ ಮೂಡುತ್ತಿದೆ.

ಜತೆಯಾಗಿ ಕೃಷಿ ಕೆಲಸ
ನಾಟಿಯ ದಿನ ನಿಗದಿ ಪಡಿಸಿ ಚಾಪೆ ನೇಜಿ ಹಾಕಲಾಗುತ್ತದೆ. ನಾವು ಮನೆಮಂದಿ ಜತೆಯಾಗಿ ಕೃಷಿ ಹಬ್ಬದ ಮಾದರಿಯಲ್ಲಿ ಕೃಷಿ ಚಟುವಟಿಕೆ ನಿರತರಾಗುತ್ತೇವೆ. ಕೃಷಿ ಕೂಲಿಯಾಳುಗಳ ಸಮಸ್ಯೆಗೆ ಮುಕ್ತಿ. ಖರ್ಚು ವೆಚ್ಚ ಸಮದೂಗಿಸಲು ಅವಿಭಕ್ತ ಕುಟುಂಬ ಕೃಷಿಗೆ ಪೂರಕ.
*ಲಕ್ಷ್ಮಣ್‌ ಮಟ್ಟು,
ಹಿರಿಯ ಪ್ರಗತಿಪರ ಕೃಷಿಕ

*ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next