Advertisement

ಗ್ರಾಮೀಣ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ  

03:45 PM Apr 17, 2022 | Niyatha Bhat |

ಶಿವಮೊಗ್ಗ/ ಸೊರಬ: ಸೊರಬ ತಾಲೂಕಿನ ಚಂದ್ರಗುತ್ತಿ ಹೋಬಳಿಯ ಅರಿಶಿ ಗ್ರಾಪಂ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮಕ್ಕೆ ಶನಿವಾರ ಜಿಲ್ಲಾಧಿಕಾರಿ ಡಾ| ಆರ್.ಸೆಲ್ವಮಣಿ ಚಾಲನೆ ನೀಡಿದರು.

Advertisement

ಈ ವೇಳೆ ಅವರು ಮಾತನಾಡಿ, ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಡಗೂಡಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇವೆ. ಸ್ಥಳೀಯ ಜನರ ಕುಂದು- ಕೊರತೆಗಳನ್ನು ಆಲಿಸಿ ಸ್ಪಂದಿಸುತ್ತಿದ್ದು ಅರಿಶಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದೇವೆ. ಸಾಮಾನ್ಯವಾಗಿ ಬೆಳಗ್ಗೆ ಗ್ರಾಪಂ ವ್ಯಾಪ್ತಿಯ ಎಲ್ಲ ಕಡೆ ಹೋಗಿ ಸಂಜೆ ವೇಳೆಯಲ್ಲಿ ಗ್ರಾಮದ ರೈತರ ಜೊತೆ ಮಾತನಾಡುತ್ತಿದ್ದೆವು. ಆದರೆ ಈ ಬಾರಿ ಗ್ರಾಮಸ್ಥರ ಬೇಡಿಕೆಯಂತೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಗ್ರಾಮದಲ್ಲಿನ ಸಮಸ್ಯೆಗಳನ್ನು ಆಲಿಸಿ ನಂತರ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚಿಸುತ್ತೇವೆ. ಸ.ನಂ.24 ರ ವಿಚಾರವನ್ನು ಕೂಡ ಪರಿಹರಿತ್ತೇವೆ. ಜೊತೆಗೆ ಗ್ರಾಮದ ಕೆರೆ, ಅಂಗನವಾಡಿ, ಶಾಲೆ ಮತ್ತು ರಸ್ತೆಗಳ ಸಮಸ್ಯೆಗಳ ಬಗ್ಗೆ ಆಲಿಸಲಾಗಿದೆ. ಇದರೊಂದಿಗೆ ಪಕ್ಕದ ಗ್ರಾಮದ ಸಮಸ್ಯೆಯನ್ನು ಕೇಳಿ ನಾಳೆ ಭೇಟಿ ನೀಡುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಗ್ರಾಮದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ಗ್ರಾಮ ವಾಸ್ತವ್ಯ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಲೈಸೆನ್ಸ್‌ ಇಲ್ಲದೆ ಕದ್ದು ಮುಚ್ಚಿ ಚಿಕ್ಕಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಅಬಕಾರಿ ಅಧಿಕಾರಿಗೆ ಸೂಚನೆ ನೀಡಿದರು. ಗ್ರಾಮಸ್ಥರು ಸೊರಬದಿಂದ ಬನವಾಸಿ ಮಧ್ಯ ಓಡಾಡಲು ಪ್ರತಿ ದಿನ ಬಸ್ಸಿನ ಸಮಸ್ಯೆ ಇದೆ. ಬನವಾಸಿ ಬಾರ್ಡರ್‌ ಈಡೂರು, ಕೆಂಚಿಕೊಪ್ಪ ಮತ್ತು ಇತರೆ ಹಳ್ಳಿಗಳಿಗೆ ಓಡಾಡಲು ಬಸ್ಸಿನ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಸಂಪರ್ಕ ರಸ್ತೆ ಮತ್ತು ಊರ ಒಳಗೆ ರಸ್ತೆ ಕಾಮಗಾರಿ ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳು, ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ರಸ್ತೆ ನಿರ್ಮಾಣ ಮಾಡಬಹುದು. ರಸ್ತೆ ಕುರಿತು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕಾಮಗಾರಿಗೆ ಅವಕಾಶ ಮಾಡಿಕೊಡಬಹುದೆಂದು ತಿಳಿಸಿದರು.

ವಿದ್ಯುತ್‌ ಲೈನ್‌ ಬದಲಾವಣೆ ಮಾಡಿ ಕೊಡಬೇಕು ಮತ್ತು ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಅಂಗನವಾಡಿ ಅಭಿವೃದ್ಧಿ ಮತ್ತು ಶಾಲಾಭಿವೃದ್ಧಿ ಕುರಿತು ಚರ್ಚಿಸಿದ ವೇಳೆ ಗ್ರಾಮಸ್ಥರು ಶಾಲೆಗೆ ನಿವೇಶನ ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿದರು.

ಸೊರಬ ಸಿವಿಲ್‌ ಕೋರ್ಟ್‌ನಲ್ಲಿ ಕುಟುಂಬ ವ್ಯಾಜ್ಯವೊಂದರ ತೀರ್ಪಿನನ್ವಯ ಪಾರ್ಟಿಷನ್‌ ಮಾಡುವ ಸಂಬಂಧ ಕೇಸ್‌ ನಂಬರ್‌ ತೆಗೆದುಕೊಳ್ಳಲಾಯಿತು. ಹಾಗೂ ದಾನಪತ್ರ ಮಾಡುವ ಕುರಿತು ಚರ್ಚೆ ವೇಳೆ, ದಾನಪತ್ರವನ್ನು ಮಾಡಲು ರಕ್ತ ಸಂಬಂಧ ಇರಬೇಕು. ಅನ್ಯವ್ಯಕ್ತಿಯಿಂದ ಭೂಮಿ ತೆಗೆದುಕೊಳ್ಳಲು ಕ್ರಯ ಪತ್ರ ಮಾಡಬಹುದು ಎಂದು ದಾನಪತ್ರದ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಲಾಯಿತು.

Advertisement

ಹಳ್ಳ ಅಗಲೀಕರಣದ ಕುರಿತ ಮನವಿಗೆ, ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸ್ಟೋನ್‌ ಪಿಚಿಂಗ್‌ ಕೆಲಸ ಮಾಡಬಹುದು ಎಂದರು. ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಗ್ರಾಮಸ್ಥರು ಡಿಸಿ ಅವರ ಗಮನ ಸೆಳೆದಾಗ, ಬಿಇಒ ಅವರ ಜೊತೆ ಈ ಸಮಸ್ಯೆ ಕುರಿತು ಚರ್ಚಿಸಿ, ಅತಿಥಿ ಶಿಕ್ಷಕರು ಮತ್ತು ರೆಗ್ಯುಲರ್‌ ಶಿಕ್ಷಕರನ್ನು ನಿಯಮಾನುಸಾರ ನಿಯೋಜಿಸುವ ಕುರಿತು ಬಿಇಒ ಅವರಿಗೆ ಸೂಚನೆ ನೀಡಿದರು. ಸಂಧ್ಯಾ ಸುರಕ್ಷಾ ಸೌಲಭ್ಯವನ್ನು ನಾಡ ಕಚೇರಿಯಿಂದ ನೀಡಲು ವಿಳಂಬವಾಗುತ್ತಿರುವ ಕುರಿತು ಗಮನ ಸೆಳೆದಾಗ ಜಿಲ್ಲಾಧಿಕಾರಿಗಳು ಅತೀ ಜರೂರಾಗಿ ಸ್ಥಳೀಯರಿಗೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗೆ ತಿಳಿಸಿದರು. ಕೆಲ ಗ್ರಾಮಸ್ಥರು ಸೀಮೆಎಣ್ಣೆ ಬೇಕೆಂದು, ರೇಷನ್‌ ಜೊತೆ ಸೀಮೆಎಣ್ಣೆ ಸಹ ನೀಡಲು ಡೀಲರ್ಸ್ ಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು. ಡಿಸಿ ಅವರು ಇದಕ್ಕೆ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಸೀಮೆಎಣ್ಣೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ| ನಾಗೇಂದ್ರ ಎಫ್‌. ಹೊನ್ನಾಳಿ, ಡಿಎಫ್‌ಒ ರಾಮಕೃಷ್ಣ, ಉಪವಿಭಾಗಾಧಿಕಾರಿ ಡಾ| ಎಲ್‌. ನಾಗರಾಜ್‌, ತಹಶೀಲ್ದಾರ್‌ ಮಂಜುಳಾ ಹೆಗಡಾಳ್‌, ತಾಪಂ ಇಒ ಕೆ.ಜಿ. ಕುಮಾರ್‌, ಆರ್‌ಎಫ್‌ಒ ಪ್ರಭುರಾಜ್‌ ಪಾಟೀಲ್‌, ಆನವಟ್ಟಿ ಆರ್‌ಎಫ್‌ಒ ಮುಹಮ್ಮದ್‌ ಪಾಷಾ ಅಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿ. ನಂಜರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next