ಬೆಂಗಳೂರು: ಸಮ್ಮಿಶ್ರ ಸರ್ಕಾರದ ಹೊಸ ಬಜೆಟ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಡಾ.ಜಯಮಾಲಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಆಯವ್ಯಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೊಸ ಯೋಜನೆಗಳನ್ನು ಸೇರಿಸುವ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ. ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಎರಡೂ ಪಕ್ಷಗಳು ಪ್ರಣಾಳಿಕೆಯಲ್ಲಿ ಕನ್ನಡ ಸಂಸ್ಕೃತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿರುವ ಭರವಸೆಗಳನ್ನು ನೋಡಿಕೊಂಡು ಬಜೆಟ್‌ನಲ್ಲಿ ಸೇರಿಸಲಾಗುವುದು ಎಂದು ಹೇಳಿದರು.
ಎಚ್‌ಐವಿ ಸೋಂಕಿತರ ಬಗ್ಗೆ ಅಲಕ್ಷ್ಯ ಬೇಡ: ಬೆಳಗಾವಿಯಲ್ಲಿ ಎಚ್‌ಐವಿ ಸೋಂಕಿತ ಮಕ್ಕಳಿರುವ ಮನೆಯನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಡ ಹೇರುವುದು ಸರಿಯಲ್ಲ. ಎಚ್‌ಐವಿ ಪೀಡಿತರೊಂದಿಗೆ ಮಾತನಾಡುವುದು ಅಥವಾ ಮುಟ್ಟುವುದರಿಂದ ಸೋಂಕು ತಗಲುವುದಿಲ್ಲ. ಮಕ್ಕಳು ತಾವು ಮಾಡದ ತಪ್ಪಿಗೆ ಆ ಸೋಂಕಿಗೆ ತುತ್ತಾಗಿವೆ. ಅಂತಹ ಮಕ್ಕಳ ಬಗ್ಗೆ ಸಮಾಜ ಅಲಕ್ಷ್ಯ ಭಾವನೆಯಿಂದ ನೋಡುವುದು ಸರಿಯಲ್ಲ. ಮಕ್ಕಳ ಬಗ್ಗೆ ಸಹಾನುಭೂತಿ ತೋರಿಸುವಂತೆ ಜಯಮಾಲಾ ಮನವಿ ಮಾಡಿದರು.
ರಾಜ್ಯ ಸರ್ಕಾರವೂ ಕೂಡ ಎಚ್‌ಐವಿ ಪೀಡಿತರಿಗೆ ವಿಶೇಷ ಆಶ್ರಯ ನೀಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 2.5 ಲಕ್ಷ ಎಚ್‌ಐವಿ ಸೋಂಕಿತರಿಗೆ ಆಶ್ರಯ ನೀಡಲಾಗಿದೆ ಎಂದು ಹೇಳಿದರು.
ತಮಗೆ ಸಚಿವ ಸ್ಥಾನ ನೀಡಿದ್ದಕ್ಕೆ ಲಕ್ಷ್ಮೀ ಹೆಬ್ಟಾಳ್ಕರ್ ಬಾಯಿ ತಪ್ಪಿನಿಂದ “ಸೇವೆ’ ಎಂಬ ಪದ ಬಳಕೆ ಮಾಡಿ ಕ್ಷಮೆ ಕೋರಿದ್ದಾರೆ. ಅಲ್ಲದೆ, ನನ್ನನ್ನು ಅಕ್ಕ ಎಂದು ಗೌರವದಿಂದ ಕರೆದಿರುವುದರಿಂದ ಆ ವಿಷಯವನ್ನು ಹೆಚ್ಚಿಗೆ ಬೆಳೆಸಲು ಇಷ್ಟ ಪಡುವುದಿಲ್ಲ. ಲಕ್ಷ್ಮೀ ಹೆಬ್ಟಾಳ್ಕರ್, ರೂಪಾ ಶಶಿಧರ್ ಸೇರಿ ಹೆಚ್ಚಿನ ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಅವಕಾಶ ದೊರೆಯಬೇಕು.
● ಜಯಮಾಲಾ, ಸಚಿವೆ