Advertisement

ಬೇಸಿಗೆಯಲ್ಲಿ ಕುಡಿವ ನೀರಿಗೆ ಆದ್ಯತೆ ನೀಡಿ

12:03 PM May 05, 2022 | Team Udayavani |

ಗದಗ: ಈಗಾಗಲೇ ಬೇಸಿಗೆ ಆರಂಭವಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕುಡಿಯುವ ನೀರು ಪೂರೈಕೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ನಗರ, ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಅಂತ್ಯದವರೆಗೂ ಸ್ಥಳೀಯ ಸಂಸ್ಥೆಗಳು ಅವಲಂಬಿತವಾಗಿರುವ ನೀರಿನ ಮೂಲಗಳನ್ನು ಪರಿಶೀಲಿಸಬೇಕು. ನೀರು ಪೂರೈಕೆಗೆ ಸಾಕಾಗುವಷ್ಟು ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಕೆಲವು ಸ್ಥಳೀಯ ಸಂಸ್ಥೆಗಳು ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿದ್ದು, ಕೊಳವೆ ಬಾವಿಗಳ ಮೂಲಕ ನೀರು ಹರಿಸುವಾಗಿ ಆಯಾ ಪ್ರದೇಶದ ವಾಲ್ವಮನ್‌ ಗಳು ಹಾಗೂ ಮೇಲ್ವಿಚಾರಕರು ನೀರು ಸೋರುವಿಕೆ ಕುರಿತು ಪರಿಶೀಲಿಸಬೇಕು. ಒಂದು ವೇಳೆ ನೀರು ಸೋರುವಿಕೆ ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸೋರುವಿಕೆ ಸರಿಪಡಿಸಿ ಸಾರ್ವಜನಿಕರಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿಗಾ ವಹಿಸಬೇಕೆಂದರು.

ಮಳೆಗಾಲ ಆರಂಭಕ್ಕೂ ಮುನ್ನ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ತಗ್ಗು ಪ್ರದೇಶದ ಜನವಸತಿ ಪ್ರದೇಶಗಳನ್ನು, ಮಣ್ಣಿನ ಮನೆಗಳನ್ನು ಗುರುತಿಸಿ ಅ ಧಿಕ ಮಳೆಯಿಂದಾಗಿ ಆಗಬಹುದಾದ ಹಾನಿಗಳ ಕುರಿತು ಆ ಪ್ರದೇಶಗಳಲ್ಲಿನ ಜನರಿಗೆ ತಿಳಿವಳಿಕೆ ನೀಡಿ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ, ನಾಲಾಗಳ ಸ್ವತ್ಛತೆಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದರು.

ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದ್ದು, ಅದರಂತೆ ಕೆರೆಗಳ ಸರ್ವೇ ಕಾರ್ಯ ಹಾಗೂ ಗಡಿ ಗುರುತಿಸಿ ಅತಿಕ್ರಮಣ ತೆರವುಗೊಳಸಬೇಕು. ಅಲ್ಲದೇ, ಕೆರೆಗಳ ಸುತ್ತಲೂ ಅರಣ್ಯ ಇಲಾಖೆ ಸಹಭಾಗಿತ್ವದೊಂದಿಗೆ ಗಿಡಗಳನ್ನು ನೆಡಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಈ ಕಾರ್ಯದಲ್ಲಿ ಸಾರ್ವಜನಿಕರ ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಕ್ರಮ ವಹಿಸಲು ನಿರ್ದೇಶನ ನೀಡಿದರು. ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುತ್ತಲೂ ಸಸಿಗಳನ್ನು ನೆಡಬೇಕೆಂದು ಸೂಚಿಸಿದರು.

ಆಶ್ರಯ ಯೋಜನೆಯಡಿ ಸ್ಥಳೀಯ ಸಂಸ್ಥೆಗಳು ಆಡಳಿತ ಮಂಡಳಿ ಸಹಯೋಗದೊಂದಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ವಿವಿಧ ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿಗದಿತ ಅವಯೊಳಗೆ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ದೂರುಗಳಿಗೆ ಆಸ್ಪದ ನೀಡದೇ ಪಾರದರ್ಶಕವಾಗಿ ಜರುಗಿಸುವಂತೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.

Advertisement

14 ಮತ್ತು 15ನೇ ಹಣಕಾಸು ಅನುದಾನದಡಿ ಮಂಜೂರಾದ ಕಾಮಗಾರಿಗಳನ್ನು ನಿಗದಿತ ಅವ ಧಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದ ಅವರು, ನಿಗದಿತ ಪ್ರಗತಿ ಸಾಧಿಸದೇ ಇದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ವಾಣಿಜ್ಯ ಮಳಿಗೆಗಳ ಬಾಡಿಗೆ ಅವಧಿ ಪೂರ್ಣಗೊಂಡಲ್ಲಿ ಕೂಡಲೇ ಸರ್ಕಾರದ ಮಾರ್ಗಸೂಚಿಗಳ ಅನುಸಾರ ಹರಾಜು ಪ್ರಕ್ರಿಯೆಗೆ ಕ್ರಮ ವಹಿಸಲು ಸೂಚಿಸಿದರು.

ಸಾರ್ವಜನಿಕರಿಗೆ ಅಗತ್ಯದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ನಗರ ಸ್ಥಳೀಯ ಸಂಸ್ಥೆಗಳ ಆದ್ಯ ಜವಾಬ್ದಾರಿಯಾಗಿದೆ. ಈ ಕುರಿತು ಯಾವುದೇ ದೂರುಗಳು ಬಾರದಂತೆ ಸೌಲಭ್ಯಗಳನ್ನು ಒದಗಿಸಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿ ದೀಪಗಳ ಕುರಿತು ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾದಲ್ಲಿ ಕೂಡಲೇ ಬೀದಿ ದೀಪಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು.

ಸ್ಥಳೀಯ ಸಂಸ್ಥೆಗಳು ಸ್ಥಳೀಯ ಪ್ರತಿನಿ ಧಿಗಳ ಸಹಯೋಗದೊಂದಿಗೆ ತೆರಿಗೆ ವಸೂಲಾತಿ ಕೈಗೊಂಡು ಆರ್ಥಿಕವಾಗಿ ಸದೃಢವಾಗಲು ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರ ಆರೋಗ್ಯವನ್ನು ಕಾಲಕಾಲಕ್ಕೆ ತಪಾಸಣೆ ಮಾಡಿ, ಅಗತ್ಯ ಸುರಕ್ಷಾ ಪರಿಕರಗಳನ್ನು ನಿಯಮಿತವಾಗಿ ಪೂರೈಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಚ್‌.ಎನ್‌.ಗುರುಪ್ರಸಾದ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸೇರಿದಂತೆ ನಗರಾಭಿವೃದ್ಧಿ ಕೋಶದ ಅಭಿಯಂತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next