Advertisement

ವಿಷ ಪ್ರಕರಣ ‘ಸ್ವಾಮೀಜಿ ವಶ’ ; ದುರಂತದ ಹಿಂದೆ ಮಹಿಳೆ

06:00 AM Dec 19, 2018 | Team Udayavani |

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಕಿಚ್‌ಗುತ್‌ ಮಾರಮ್ಮ ದೇವಸ್ಥಾನದ “ವಿಷಪ್ರಸಾದ’ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಂಗಳವಾರ ರಾತ್ರಿ ಮಾರಮ್ಮ ದೇಗುಲದ ಟ್ರಸ್ಟ್‌ ಅಧ್ಯಕ್ಷರಾದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಅವರನ್ನು ವಶಕ್ಕೆ, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. 15 ಜನರ ಸಾವಿಗೆ ಕಾರಣರಾಗಿರುವ ಪ್ರಕರಣದಲ್ಲಿ ಭಾಗಿ ಆಗಿರುವುದಾಗಿ ದೇವಾಲಯದ ಟ್ರಸ್ಟ್‌ ವ್ಯವಸ್ಥಾಪಕ ಮಾದೇಶ್‌ ಪತ್ನಿ ಅಂಬಿಕಾ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾಳೆ ಎಂದೂ ಹೇಳಲಾಗಿದೆ.

Advertisement

ಅಂಬಿಕಾ ಹೇಳಿಕೆಯನ್ನು ಅಧರಿಸಿ ಮತ್ತೂಮ್ಮೆ ಇಮ್ಮಡಿ ಮಹದೇವಸ್ವಾಮಿ ಅವರನ್ನು ಕೊಳ್ಳೆಗಾಲದ ಸಾಲೂರು ಮಠದ ಸಂಸ್ಕೃತ ಪಾಠಶಾಲೆಯಲ್ಲಿ ಮಂಗಳವಾರ ಪೊಲೀಸರು ವಿಚಾರಣೆ ನಡೆಸಿದರು. ಬಳಿಕ ರಾತ್ರಿ 11.30ರ ಸುಮಾರಿಗೆ ಅವರನ್ನು ವಶಕ್ಕೆ ಪಡೆದು ಕೊಳ್ಳಲಾಯಿತು. ಅಲ್ಲದೆ, ಇಮ್ಮಡಿ ಮಹದೇವಸ್ವಾಮಿ ಸೂಚನೆ ಮೇರೆಗೆ ವ್ಯವಸ್ಥಾಪಕ ಮಾದೇಶ್‌ ಮತ್ತು ಆತನ ಪತ್ನಿ ಅಂಬಿಕಾ, ದೇಗುಲದ ಟ್ರಸ್ಟಿ ಚಿನ್ನಪ್ಪಿ ಹಾಗೂ ನಾಗರಕಲ್ಲು ಅರ್ಚಕ ದೊಡ್ಡಯ್ಯ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇನ್ನೂ ಕೆಲವು ಮಂದಿ  ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇಮ್ಮಡಿ ಮಹದೇವಸ್ವಾಮಿ ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಸಹ ಆಗಿದ್ದಾರೆ.

ಯಾವ ಕಾರಣಕ್ಕಾಗಿ ವಿಷ ಬೆರೆಸಲಾಗಿದೆ? ಸ್ವಾಮೀಜಿ ಯಾಕೆ ವಿಷ ಹಾಕಲು ಹೇಳಿದ್ದರು? ಎಂಬುದು ಇನ್ನಷ್ಟೇ  ಗೊತ್ತಾಗಬೇಕಿದೆ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ಅವರನ್ನು ಸಂಪರ್ಕಿಸಿದಾಗ, ಇದು ಅಧಿಕೃತ ಮಾಹಿತಿಅಲ್ಲ. ಈ ಬಗ್ಗೆ ನಾನು ಈಗ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ರಾತ್ರಿ ಕೊಳ್ಳೆಗಾಲ ಪೊಲೀಸ್‌ ಠಾಣೆಯಲ್ಲಿ
ಮಾಧ್ಯಮಗಳ ಜತೆ ಮಾತನಾಡಿ, ಇಮ್ಮಡಿ ಮಹದೇವ ಸ್ವಾಮಿ ಅವರನ್ನು ಎರಡು ಬಾರಿ ವಿಚಾರಣೆ ನಡೆಸಿದ್ದೇವೆ. ತನಿಖೆ ಹಂತದಲ್ಲಿರುವ ಕಾರಣ ಬಂಧನದ ವಿಚಾರವಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಆದಷ್ಟು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಎಸ್ಪಿ ಮೀನಾ ಹೇಳಿದ್ದಾರೆ. 14ರಂದು ನಡೆದಿದ್ದ ಮಾರಮ್ಮ ದೇವಾಲಯದ ಗೋಪುರ ಶಂಕುಸ್ಥಾಪನೆ ಸಂದರ್ಭದಲ್ಲಿ ನಡೆದ ಅನ್ನ ಸಂತರ್ಪಣೆಗೆ ಸಿದ್ಧಪಡಿಸಲಾದ ಪ್ರಸಾದಕ್ಕೆ ವಿಷ ಬೆರೆಸಲಾಗಿತ್ತು. ಸಮಾರಂಭಕ್ಕೆ ಟ್ರಸ್ಟ್‌ ಅಧ್ಯಕ್ಷರಾಗಿದ್ದ ಇಮ್ಮಡಿ ಮಹದೇವಸ್ವಾಮಿ ಗೈರು ಹಾಜರಾಗಿದ್ದರು.

ಸಾಲೂರು ಮಠದ ಹಿರಿಯ ಸ್ವಾಮೀಜಿ ಪಟ್ಟದ ಗುರುಸ್ವಾಮೀಜಿ ಆಗಮಿಸಿ, ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕಾರಣದಿಂದಲೇ ದೇವಾಲಯದ ಟ್ರಸ್ಟಿ ಚಿನ್ನಪ್ಪಿಯ ಮಗ ಲೋಕೇಶ್‌ ಮಾಧ್ಯಮದವೊಂದಿಗೆ ಟ್ರಸ್ಟ್‌ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಈ ಕೃತ್ಯದಲ್ಲಿ
ಭಾಗಿಯಾಗಿದ್ದಾರೆಂಬ ಸಂಶಯ ವ್ಯಕ್ತಪಡಿಸಿದ್ದರು.

ಮಠಾಧೀಶರ ಕಳವಳ: ಪ್ರಕರಣಕ್ಕೆ ಸಂಬಂಧಿಸಿ ನಾಡಿನ ಹಲವು ಮಠಾಧೀಶರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ದೇವರ ಪ್ರಸಾದದ ಬಗ್ಗೆ ಕಾಳಜಿ ಇರಬೇಕೇ ಹೊರತು ಅನುಮಾನವಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next