ಹುಬ್ಬಳ್ಳಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯಿಂದ ತಾವು ಟಿಕೆಟ್ ಆಕಾಂಕ್ಷಿ ಆಗಿದ್ದು, ತಮಗೆ ಟಿಕೆಟ್ ದೊರೆಯುವ ವಿಶ್ವಾಸವಿದೆ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ವಿಷಯವಾಗಿ ಹಲವು ನಾಯಕರೊಂದಿಗೆ ಚರ್ಚಿಸಿದ್ದೇನೆ. ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ನನಗೀಗ 66 ವರ್ಷ, ಇದು ಕೊನೆಯ ಯತ್ನ. ದೊರೆತರೆ ಸರಿ ಇಲ್ಲವಾದರೆ ಇಲ್ಲ. ಪಕ್ಷೇತರನಾಗಿ ಸ್ಪರ್ಧಿಸುವುದಿಲ್ಲ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಅವಧಿ ಎರಡೂವರೆ ವರ್ಷ ಇದೆ. ನನಗೆ ಟಿಕೆಟ್ ದೊರೆತು ಗೆದ್ದರೆ ಆದರ್ಶ ಕ್ಷೇತ್ರವಾಗಿಸುವೆ. ಅವಧಿ ಮುಗಿದ ನಂತರ ರಾಜಕೀಯವಾಗಿ ನಿವೃತ್ತಿ ಹೊಂದುವುದಾಗಿ ತಿಳಿಸಿದರು.
ಇದನ್ನೂ ಓದಿ:ನೀರು ಉಳಿಸಿಸುವ ಕೆಲಸ ಸರ್ಕಾರವೇ ಮಾಡಬೇಕೆಂಬ ಭಾವನೆ ಹೋಗಬೇಕು: ಮೋದಿ ಕರೆ
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಪಕ ಭ್ರಷ್ಟಾಚಾರ, ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಗುತ್ತಿಗೆ ಆಧಾರದ ಇಬ್ಬರು ಯುವತಿಯರನ್ನು ಮೀಟಿಂಗ್ ಎಂದು ಗೋವಾಕ್ಕೆ ಕರೆದೊಯ್ದು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅವರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ದೂರು ನೀಡಿ ಎರಡು ತಿಂಗಳಾದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಈ ಘಟನೆಯಲ್ಲಿ ಕುಲಪತಿ ಆಪ್ತ ಸಹಾಯಕ ಹಾಗೂ ಸಹಾಯಕನ ಶಾಮೀಲು ಇದ್ದು, ಕೆಲ ಮೂಲಗಳ ಪ್ರಕಾರ ಕುಲಪತಿಯವರು ಸಹ ಘಟನೆಯಲ್ಲಿ ಪಾಲು ಪಡೆದಿದ್ದಾರೆ ಎಂದಿದೆ.
ಕೃಷಿ ವಿವಿ ನಲ್ಲಿ ಅನೇಕ ಮಹಿಳೆರಿಗೂ ಲೈಂಗಿಕ ಕಿರುಕುಳ ಆರೋಪವಿದೆ. ಪ್ರಕರಣ ಕುರಿತು ಸಮಗ್ರ ತನಿಖೆ ನಡೆಯಬೇಕು. ಪ್ರಕರಣ ಕುರಿತು ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಹಾಗೂ ಕೃಷಿ ಸಚಿವರಿಗೆ ದೂರು ಸಲ್ಲಿಸುವೆ. ಕುಲಪತಿ ಅಮಾನತುವರೆಗೂ ತಮ್ಮ ಹೋರಾಟ ನಿಲ್ಲದು ಎಂದು ಮುತಾಲಿಕ ತಿಳಿಸಿದರು.