ಬೆಂಗಳೂರು: ಹಾಸನದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು (ಎಸ್‌ಐಟಿ) ತೆರೆದಿದ್ದ ಸಹಾಯವಾಣಿಗೆ ಹಲವು ಕರೆಗಳು ಬಂದಿದ್ದು, ಆದರೆ, ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿಯಲ್ಲಿ ಇದುವರೆಗೆ 4 ಎಫ್ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಇನ್ನೂ ಹಲವು ಯುವತಿಯರು ಸಿಲುಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಎಸ್‌ಐಟಿಯು ಸಹಾಯವಾಣಿ ಆರಂಭಿಸಿತ್ತು. ಸಂತ್ರಸ್ತೆಯರು ಸಹಾಯವಾಣಿಗೆ ಈ ಬಗ್ಗೆ ಮಾಹಿತಿ ನೀಡಬಹುದು ಎಂದು ಎಸ್‌ಐಟಿ ಮನವಿ ಮಾಡಿರುವ ಬೆನ್ನಲ್ಲೇ ಹಲವು ಕರೆಗಳು ಬಂದಿವೆ ಎಂದು ತಿಳಿದು ಬಂದಿದೆ.
ಆದರೆ, ದೂರು ನೀಡಿದರೆ ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಸಿದ್ದವಿದೆ. ದೂರುದಾರರ ಗುರುತು, ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂಬ ಭರವಸೆಯನ್ನೂ ಎಸ್‌ಐಟಿ ಈಗಾಗಲೇ ಕೊಟ್ಟಿದೆ. ಆದರೆ, ಕರೆ ಮಾಡಿದ ಸಂತ್ರಸ್ತೆಯರು ದೂರು ನೀಡಲಿಲ್ಲ ಎಂದು ತಿಳಿದು ಬಂದಿದೆ.
ಸಂತ್ರಸ್ತೆಯರು ಮಾತ್ರವಲ್ಲದೇ ಅವರ ಕುಟುಂಬಸ್ಥರೂ ಸಹ ಕರೆ ಮಾಡಿ ನಮ್ಮ ಹೆಸರು ಬಾರದಂತೆ ಹಾಗೂ ಆರೋಪಗಳು ಬಾರದಂತೆ ನೋಡಿಕೊಳ್ಳಲು ಮನವಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಎಸ್‌ಐಟಿ ಅಧಿಕಾರಿಗಳು ಮಾತ್ರ ಈ ಕುರಿತು ಮಾಹಿತಿ ಕೊಡಲು ನಿರಾಕರಿಸಿದ್ದಾರೆ. ತನಿಖೆ ಚುರುಕಾಗಿ ನಡೆಯುತ್ತಿದೆ ಎಂದಷ್ಟೆ ಹೇಳುತ್ತಿದ್ದಾರೆ.