ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ದಾಖಲಾಗಿರುವ ಹನಿ ಟ್ರ್ಯಾಪ್ ಯತ್ನ ಹಾಗೂ ಕೊಲೆಗೆ ಸುಪಾರಿ ನೀಡಿದ ಪ್ರಕರಣ ಸದ್ಯದಲ್ಲೇ ಸಿಐಡಿಯ ವಿಶೇಷ ತನಿಖಾ ದಳ(ಎಸ್ ಐಟಿ)ಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ.
ಬಿಬಿಎಂಪಿ ಮಾಜಿ ಸದಸ್ಯ ನಾರಾಣಸ್ವಾಮಿ ಮುನಿರತ್ನ ವಿರುದ್ಧ ಜೀವ ಬೆದರಿಕೆ, ಕೊಲೆಗೆ ಸುಪಾರಿ, ಕಿರುಕುಳ ವಿವಿಧ ಆರೋಪದಡಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈಗಾಗಲೇ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ 2 ಮತ್ತು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿವೆ. ಈ 3 ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಎಸ್ ಐಟಿ ರಚಿಸಿದೆ. ಈಗಾಗಲೇ ಎಸ್‌ಐಟಿ ಒಂದೊಂದೇ ಪ್ರಕರಣ ತನಿಖೆ ನಡೆಸುತ್ತಿದೆ. ಇದೀಗ ಮುನಿರತ್ನ ವಿರುದ್ಧ ನಂದಿನಿ ಲೇಔಟ್‌ನಲ್ಲಿ ದಾಖಲಾಗಿರುವ ಪ್ರಕರಣವನ್ನೂ ಸರ್ಕಾರ ಎಸ್‌ಐಟಿ ತನಿಖೆಗೆ ವರ್ಗಾಯಿಸುವ ಸಾಧ್ಯತೆಯಿದೆ.
ಈಗಾಗಲೇ ಜಾತಿ ನಿಂದನೆ ಆರೋ ಪದ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ, ಆರೋಪಿ ಮುನಿರತ್ನ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇನ್ನು ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಹಣಕ್ಕೆ ಬೇಡಿಕೆ ಆರೋಪದ ಪ್ರಕರಣ ಮತ್ತು ಮಹಿಳೆಯ ಅತ್ಯಾಚಾರ ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಸದ್ಯದಲ್ಲೇ ಈ ಪ್ರಕರಣಗಳ ಆರೋಪಪಟ್ಟಿ ಸಲ್ಲಿಸಲಿದ್ದಾರೆ.