ಬೆಳ್ತಂಗಡಿ: ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳು ಆರ್ಥಿಕ ನೆರವು ಪಡೆಯಲು ಕಡ್ಡಾಯವಾಗಿ ನಾಗರಿಕ ಸೇವ ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಇ-ಕೆವೈಸಿ ನಡೆಸುವಂತೆ ಸರಕಾರ ನೀಡಿದ್ದ ಕಾಲಾವಧಿಯು ಸೆ.7ಕ್ಕೆ ಕೊನೆಗೊಂಡಿದೆ. ಈ ಅವಧಿ ಪೂರ್ಣಗೊಂಡ ಹಂತದಲ್ಲಿ ದ.ಕ. ಜಿಲ್ಲೆಯ ಶೇ. 71ರಷ್ಟು ರೈತರು ಇ-ಕೆವೈಸಿ ನಡೆಸಿದ್ದಾರೆ. ಇನ್ನೂ ಶೇ. 29 ರೈತರ ಇ-ಕೆವೈಸಿ ಬಾಕಿಯಿದೆ.
ಆರಂಭದಲ್ಲಿ ಆ. 15ರೊಳಗೆ ಸಮಯ ನಿಗದಿ ಪಡಿಸಲಾಗಿತ್ತು. ಆದರೆ ರೈತರ ನಿರಾಸಕ್ತಿ ನೋಡಿ ಬಳಿಕ ಆ. 31ರ ವರೆಗೆ ಮುಂದೂಡಲಾಗಿತ್ತು. ಆದರೂ ದ.ಕ. ಜಿಲ್ಲೆಯ 1,54,754 ರೈತರಲ್ಲಿ ಆ. 23ರ ವರೆಗೆ 82,001 ಮಂದಿ (ಶೇ. 53)ಇ-ಕೆವೈಸಿಗೆ ಆಸಕ್ತಿ ತೋರಿದ್ದರು. ಈ ವೇಳೆ ಉದಯವಾಣಿ ಈ ಕುರಿತು ವರದಿ ಪ್ರಕಟಿಸಿತ್ತು. ವರದಿಯ ಬಳಿಕ ರೈತರು ಹೆಚ್ಚಿನ ಆಸಕ್ತಿ ತೋರಿರುವುದು ಕಂಡುಬಂದಿತ್ತು. ಆ. 31ರ ವೇಳೆಗೆ ಜಿಲ್ಲೆಯ 98,843 ಅಂದರೆ ಶೇ. 64ರಷ್ಟು ಪ್ರಗತಿ ಕಂಡಿತ್ತು.
ಸರಕಾರ ಮತ್ತೆ ಇ-ಕೆವೈಸಿ ದಿನಾಂಕ ಪರಿಷ್ಕೃತಗೊಳಿಸಿ ಸೆ. 7ರ ವರೆಗೆ ದಿನಾಂಕ ಮುಂದೂಡಿತ್ತು. ಪ್ರಸಕ್ತ ದ.ಕ. ಜಿಲ್ಲೆಯಲ್ಲಿ 1,08,337ರಷ್ಟು(ಶೇ.71)ರೈತರು ಇ-ಕೆವೈಸಿ ನಡೆಸುವ ಮೂಲಕ ಉತ್ತಮ ಪ್ರಗತಿ ಕಂಡಿದೆಯಾದರೂ ಬುದ್ಧಿವಂತರ ಜಿಲ್ಲೆ ಎಂದು ಬೀಗುವ ಜಿಲ್ಲೆಯ ಮಂದಿ ಸರಕಾರಿ ಇಲಾಖೆ ಸವಲತ್ತು ಪಡೆಯಲು ಇನ್ನೂ ಹಿಂದುಳಿದಿದ್ದಾರೆ ಎಂಬುದು ಸಾಬೀತಾಗಿದೆ. ಇಷ್ಟೊಂದು ಜಾಗೃತಿ ಪ್ರಚಾರದ ಮಧ್ಯೆಯೂ ಕನಿಷ್ಠ ಶೇ. 90ರಷ್ಟು ತಲುಪಿಲ್ಲ. ದ.ಕ. ಜಿಲ್ಲೆಯಲ್ಲಿರುವ 1,54,754 ಫಲಾನುಭವಿಗಳ ಪೈಕಿ 44, 832 ಮಂದಿ ಇ-ಕೆವೈಸಿ ನಡೆಸಿಲ್ಲ.
ಸಹಾಯ ಧನ
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ಆರ್.ಟಿ.ಸಿ. ಹೊಂದಿರುವ ಪ್ರತಿ ರೈತರು ಅಂದರೆ 2019ರ ಫೆಬ್ರವರಿವರೆಗೆ ನೋಂದಾಯಿಸಿಕೊಂಡವರಿಗೆ ರಾಜ್ಯದಿಂದ ಎರಡು ಕಂತುಗಳಲ್ಲಿ 4,000 ರೂ. ಹಾಗೂ ಕೇಂದ್ರದಿಂದ ನಾಲ್ಕು ಕಂತಿನಲ್ಲಿ 6,000 ರೂ. ಸೇರಿ 10,000 ರೂ. ಖಾತೆಗೆ ಜಮೆಯಾಗುತ್ತದೆ.