Advertisement

Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!

12:42 PM Dec 21, 2024 | Team Udayavani |

ಬೆಳ್ತಂಗಡಿ: ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ 7 ಗ್ರಾಮಗಳಿಗೊಳಪಟ್ಟ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಸಲುವಾಗಿ ಮೆಸ್ಕಾಂ ಸರ್ವೇ ಕಾರ್ಯ ಆರಂಭಿಸಿದೆ.

Advertisement

ಬೆಳ್ತಂಗಡಿ ತಾಲೂಕಿನ ನಾರಾವಿ, ಕುತ್ಲೂರು, ಸುಲ್ಕೇರಿಮೊಗ್ರು, ನಾವರ, ಸವಣಾಲು, ನಾವೂರು, ಮಲವಂತಿಗೆ ಗ್ರಾಮಗಳಲ್ಲಿರುವ ಆದಿವಾಸಿ ಮಲೆ ಕುಡಿಯ ಕುಟುಂಬಗಳು ವಿದ್ಯುತ್‌ ಸಂಪರ್ಕದಿಂದ ವಂಚಿತವಾಗಿದ್ದು, ಸುಮಾರು 150ಕ್ಕೂ ಅಧಿಕ ಮನೆಗಳು ಕತ್ತಲಿನಲ್ಲಿ ಕಾಲ ಕಳೆಯುತ್ತಿವೆ. ಇಲ್ಲಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಹಲವು ದಶಕಗಳ ಹೋರಾಟ ನಡೆದಿದ್ದರೂ ಅರಣ್ಯ ತೊಡಕಿನಿಂದ ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲ ಅಡೆತಡೆ ನಿವಾರಿಸಿ ವಿದ್ಯುತ್‌ ಒದಗಿಸುವ ನಿಟ್ಟಿನಲ್ಲಿ ಸರ್ವೇ ನಡೆಯಲಿದೆ.

ಮೆಸ್ಕಾಂನಿಂದ ಪೂರ್ಣ ವೆಚ್ಚ
ಕಾಡಂಚಿನ ಮನೆಗಳು ಕಿ.ಮೀ. ದೂರವಿದ್ದು ಅಧಿಕಾರಿಗಳು ನಡೆದು ಸಾಗಿ ಸರ್ವೇ ಕಾರ್ಯ ನಡೆಸುತ್ತಿದ್ದಾರೆ. ಪ್ರಸಕ್ತ ನಾಲ್ಕು ಗ್ರಾಮಗಳ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಒಂದೊಮ್ಮೆ 7 ಗ್ರಾಮಗಳ ಸರ್ವೇ ಪೂರ್ಣಗೊಂಡಲ್ಲಿ ಮೆಸ್ಕಾಂ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಲಿದೆ. ಇದನ್ನು ಅರಣ್ಯ ಇಲಾಖೆ ಮಂಜೂರುಗೊಳಿಸಿದರಷ್ಟೆ ವಿದ್ಯುತ್‌ ಭಾಗ್ಯ ದೊರೆಯಲಿದೆ. ಇದಕ್ಕೆ ಕೇಂದ್ರ ಸಮಿತಿಯ ನಿರ್ಧಾರವೂ ಅತ್ಯವಶ್ಯವಾಗಿದೆ.

ಅನುಮೋದನೆ ದೊರೆತಲ್ಲಿ ಅರಣ್ಯ ದಂಚಿನ ಎಲ್ಲ ಮನೆಗಳಿಗೂ ಮೆಸ್ಕಾಂನಿಂದಲೇ ವಿದ್ಯುತ್‌ ಕಂಬ ಸಹಿತ ಸಂಪರ್ಕಕ್ಕೆ ಬೇಕಾಗುವ ಎಲ್ಲ ಸಲಕರಣೆ ಸಹಿತ ಉಚಿತವಾಗಿ ಸಂಪರ್ಕ ನೀಡಲಿದೆ. ಆದರೆ ಬಳಸಿದ ವಿದ್ಯುತ್‌ ಬಿಲ್‌ ಮಾತ್ರ ಮನೆಯವರೇ ಭರಿಸಬೇಕು.

ವರ್ಷದ ಸುದೀರ್ಘ‌ ಪ್ರಕ್ರಿಯೆ
ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಮತ್ತು ಖಾಸಗಿ ಏಜೆನ್ಸಿ ಮೂಲಕ 7 ಗ್ರಾಮಗಳಿಗೆ ಒಳಪಟ್ಟಂತೆ ಪ್ರತೀ ಮನೆಗಳನ್ನು ಸಂಪರ್ಕಿಸಿ ಆನ್‌ಲೈನ್‌ ಮೂಲಕ ರಿಜಿಸ್ಟರ್‌ ಮಾಡಿ ಪ್ರಸ್ತಾವನೆ ಕಳುಹಿಸಲು ಮುಂದಾಗಿದೆ. ಪ್ರಸಕ್ತ ಎರಡು ತಿಂಗಳಿಂದ ಸರ್ವೇ ಕಾರ್ಯ ಆರಂಭಿಸಿದ್ದು ಸುದೀರ್ಘ‌ ಪ್ರಕ್ರಿಯೆಯಾಗಿರುವುದರಿಂದ ಸುಮಾರು ಒಂದು ವರ್ಷವೇ ತಗಲುವ ಸಾಧ್ಯತೆಯಿದೆ.

Advertisement

ಶಿರ್ಲಾಲು, ಎಳನೀರು ಮನೆಗಳಿಗೆ ಸಂಪರ್ಕ
ಸುಲ್ಕೇರಿಮೊಗ್ರು ಬಳಿ 33 ಮನೆಗಳಿಗೆ ಕಳೆದ ವರ್ಷವೇ ಈ ಯೋಜನೆಯಲ್ಲಿ ವಿದ್ಯುತ್‌ ಸಂಪರ್ಕವಾಗಿದೆ. ಉಳಿದಿರವ ಮನೆಗಳ ಸಮೀಕ್ಷೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಶಿರ್ಲಾಲು ಗ್ರಾಮದ 13 ಮನೆ ಹಾಗೂ ಎಳನೀರು ಭಾಗದ 33 ಮನೆಗಳಿಗೆ ಈ ಹಿಂದೆ ಶಾಸಕ ಹರೀಶ್‌ ಪೂಂಜ ಅವರ ಮುತುವರ್ಜಿಯಲ್ಲಿ ಖಾಸಗಿ ಸ್ಥಳದ ಮೂಲಕ ವಿದ್ಯುತ್‌ ಸಂಪರ್ಕ ಒದಗಿಸಲಾಗಿತ್ತು. ಆದರೆ ಈಗ ಸರ್ವೇ ಕಾರ್ಯ ನಡೆಯುವ ಗ್ರಾಮದ ಮನೆಗಳಿಗೆ ಸಂಪರ್ಕ ಒದಗಿಸಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ದಾಟಿಯೇ ಸಾಗಬೇಕಿರುವುದರಿಂದ ಬಹಳಷ್ಟು ಸವಾಲು ಎದುರಿಸಬೇಕಿದೆ. ಗುಡ್ಡಗಾಡು ಪ್ರದೇಶವಾದ್ದರಿಂದ ಒಂದು ಗ್ರಾಮದಲ್ಲಿ ಸಮೀಕ್ಷೆ ನಡೆಸಲು ಕನಿಷ್ಠ ಮೂರು ದಿನಗಳು ಬೇಕಾಗಿದ್ದು ಪ್ರಸ್ತುತ ಇದು ಪ್ರಗತಿಯಲ್ಲಿದೆ.

ಸಿಎಂ ಸಿದ್ದರಾಮಯ್ಯ ಅವರಿಂದಲೇ ಸೂಚನೆ
ನ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರಗಿದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅರಣ್ಯ ಮತ್ತು ಅರಣ್ಯದಂಚಿನಲ್ಲಿರುವ ಬುಡಕಟ್ಟು ಸಮುದಾಯದವರಿಗೆ ರಸ್ತೆ, ವಿದ್ಯುತ್‌, ಕುಡಿಯುವ ನೀರು ಸಹಿತ ತುರ್ತಾಗಿ ಮೂಲ ಸೌಕರ್ಯ ಒದಗಿಸುವಂತೆ ಆದೇಶಿಸಿದ್ದರು. ಈ ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿ ಮು ಲ್ಲೈ ಮುಗಿಲನ್‌ ಡಿ.5 ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ, ಸರಕಾರದ ಅಪರ ಕಾರ್ಯದರ್ಶಿಗೆ ಪತ್ರ ಬರೆದು ಸುಲ್ಕೇರಿಮೊಗ್ರು ಗ್ರಾಮದ ವಿದ್ಯುತ್‌ ಸಂಪರ್ಕಕ್ಕೆ ಸಂಬಂಧಿಸಿದ ಬಾಕಿಯಾಗಿರುವ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವಂತೆ ತಿಳಿಸಿ, ಉಳಿದ ಸ್ಥಳಗಳಲ್ಲಿ ತತ್‌ಕ್ಷಣ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದರು.

ಬೆಳ್ತಂಗಡಿ ತಾಲೂಕಿನಲ್ಲಿ ಅರಣ್ಯದಂಚಿನ ವಿದ್ಯುತ್‌ ಸಂಪರ್ಕವಿಲ್ಲದ ಮನೆಗಳನ್ನು 2025 ಜ.12ರ ಒಳಗೆ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಬಳಿಕ ಕಡತ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು.
– ಕ್ಲೆಮೆಂಟ್‌ ಬೆಂಜಮಿನ್‌ ಬ್ರಾಗ್ಸ್‌, ಎಇಇ, ಮೆಸ್ಕಾಂ, ಬೆಳ್ತಂಗಡಿ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next