ಕೋಲಾರ: ಮಾಸ್ಕ್ ಹಾಕಿಕೊಂಡು ಮನೆಯಲ್ಲೇ 3 ಗಂಟೆಗಳ ಕಾಲ ಪ್ರಶ್ನೆಗಳಿಗೆ ಉತ್ತರ ಬರೆಯುವುದನ್ನು ಅಭ್ಯಾಸ ಮಾಡಿ, ಜೂ.15ರ ನಂತರ ಪ್ರವೇಶ ಪತ್ರವನ್ನು ಶಾಲೆಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದರು. ನಗರದ ಡಿಡಿಪಿಐ ಕಚೇರಿಯಲ್ಲಿ ಗುರುವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ದೂರವಾಣಿ ಕರೆ ಮಾಡಿದ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಅವರು ಮಾತನಾಡಿದರು. ಮಕ್ಕಳು ಮೊದಲನೇ ಬಾರಿ ಮಾಸ್ಕ್ ಹಾಕಿಕೊಂಡು ಪರೀಕ್ಷೆ ಬರೆಯಬೇಕಾ ಗಿರುವುದರಿಂದ ಕಷ್ಟವಾಗಬಹುದು, ಅದಕ್ಕಾಗಿ ಮನೆಯಲ್ಲೇ ಕುಳಿತು ಮಾಸ್ಕ್ ಹಾಕಿಕೊಂಡು ಬರೆಯುವುದನ್ನು ಅಭ್ಯಾಸ ಮಾಡಿ ಎಂದು ಹೇಳಿದರು.
ಇಲಾಖೆಯಿಂದಲೂ ಮಕ್ಕಳಿಗೆ ಫೋನ್ ಕರೆ: ಮಕ್ಕಳು ದೂರವಾಣಿ ಕರೆ ಮಾಡಿದ್ದರ ಜತೆಗೆ ಇದೇ ಮೊದಲ ಬಾರಿಗೆ ಮಕ್ಕಳ ದೂರವಾಣಿ ಸಂಖ್ಯೆ ಸಂಗ್ರಹಿಸಿ ಪ್ರತಿ ಶಾಲೆಯ ತಲಾ 3 ವಿದ್ಯಾರ್ಥಿಗಳಿಗೆ ಇಲಾಖೆಯ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳೇ ಕರೆ ಮಾಡಿ ಸಮಸ್ಯೆಗಳಿದ್ದರೆ ತಿಳಿಸಿ ಎಂದು ಕೇಳಿದ್ದು, ವಿಶೇಷವಾಗಿತ್ತು.
ಮಾಸ್ಕ್ ನಾವೇ ತರಬೇಕೆ?: ಸಾಮಾಜಿಕ ಅಂತರ ಎಷ್ಟು? ಜ್ವರ ಬರುತ್ತಿದ್ದರೆ ಪರೀಕ್ಷೆ ಬರೆಯಲು ಅವಕಾಶ ನೀಡುತ್ತೀರಾ ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ರತ್ನಯ್ಯ, ಮಾಸ್ಕ್ಗಳನ್ನು ನಿಮ್ಮ ಶಾಲೆಗಳಲ್ಲೇ ವಿತರಿಸಲು ವ್ಯವಸ್ಥೆ ಮಾಡುತ್ತೇವೆ, ನಿಮ್ಮಲ್ಲಿ ಮಾಸ್ಕ್ ಇದ್ದರೆ ಹಾಕಿಕೊಂಡು ಬಂದರೂ ಪ್ರವೇಶ ನೀಡಲಾಗುತ್ತದೆ ಎಂದು ತಿಳಿಸಿದರು. ಪ್ರತಿ ವಿದ್ಯಾರ್ಥಿ ನಡುವೆ ಒಂದು ಮೀಟರ್ ಅಂತರ ಕಾಯ್ದುಕೊಳ್ಳಲಾಗುತ್ತದೆ, ಡೆಸ್ಕ್ನಿಂದ ಡೆಸ್ಕ್‌ಗೆ ಒಂದು ಮೀಟರ್ ಅಂತರ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು.
ನೀರು ಮನೆಯಿಂದಲೇ ತನ್ನಿ: ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಪರೀಕ್ಷೆಗೆ ಬರುವ ಮಕ್ಕಳಿಗೆ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ಪ್ರತಿ ವಿದ್ಯಾರ್ಥಿಯೂ ಮನೆಯಿಂದಲೇ ಕುಡಿಯುವ ನೀರು ತನ್ನಿ ಎಂದು ಸಲಹೆ ನೀಡಿದರು.
ಮಕ್ಕಳ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಬದಲಾವಣೆ ಇಲ್ಲ ಮತ್ತು ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡುವು ದು ಇಲ್ಲ, ನಿಮ್ಮ ಅಭ್ಯಾಸ ಮುಂದುವರಿಸಿ ಎಂದು ಕಿವಿಮಾತು ಹೇಳಿದರು.
ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸ್ ಮಾಡುವಿಕೆ, ಮಕ್ಕಳು, ಸಿಬ್ಬಂದಿಗೆ ಥರ್ಮಲ್ ಟೆಸ್ಟ್ ಮತ್ತಿತರ ಕಾರಣಗಳಿಗಾಗಿ ಪರೀಕ್ಷೆಯನ್ನು ಹಿಂದಿನ ವರ್ಷಗಳಲ್ಲಿ ನಡೆಸುತ್ತಿದ್ದ 9-30ರ ಬದಲಾಗಿ 10-30ಕ್ಕೆ ಆರಂಭಿಲಾಗುತ್ತದೆ. ಆದರೆ, ಮಕ್ಕಳು 9 ಗಂಟೆಗೆ ಹಾಜರಿದ್ದು, ಥರ್ಮಲ್ ಟೆಸ್ಟ್‌ಗೆ ಒಳಗಾಗಬೇಕು ಎಂದು ತಿಳಿಸಿದರು.