ಪರ್ತ್: ಬಾರ್ಡರ್ ಗಾವಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿಯ (Virat Kohli) ಫಾರ್ಮ್ ಚಿಂತೆಯಾಗಿದೆ. ತವರಿನಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲೂ ವಿರಾಟ್ ವಿಫಲರಾಗಿದ್ದರು. ಆಸೀಸ್ ನೆಲದಲ್ಲಿ ನಡೆದ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲೂ ವಿರಾಟ್ ಕೇವಲ 15 ರನ್ ಗೆ ವಿಕೆಟ್ ಒಪ್ಪಿಸಿದ್ದರು.
ವಾಕಾದಲ್ಲಿ ನಡೆದ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕೆಎಲ್ ರಾಹುಲ್ ಗಾಯಗೊಂಡು ಮೈದಾನದ ತೊರೆದ ಬಳಿಕ ವಿರಾಟ್ ಕ್ರೀಸ್ ಗೆ ಬಂದಿದ್ದರು. ಆರಂಭದಲ್ಲಿ ತನ್ನ ಟ್ರೇಡ್ ಮಾರ್ಕ್ ಹೊಡೆತವಾದ ಕವರ್ ಶಾಟ್ ಹೊಡೆದ ವಿರಾಟ್ ಬಳಿಕ ಔಟಾಗಿದ್ದರು.
ಭಾರತೀಯ ವೇಗಿಗಳಾದ ಮುಕೇಶ್ ಕುಮಾರ್, ಪ್ರಸಿಧ್ ಕೃಷ್ಣ, ನವದೀಪ್ ಸೈನಿ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕೊಹ್ಲಿ ಎದುರಿಸಿದ್ದರು. ಮುಕೇಶ್ ಕುಮಾರ್ ಅವರನ್ನು ಎದುರಿಸಲು ಕೊಹ್ಲಿ ತುಸು ಕಷ್ಟ ಅನುಭವಿಸಿದರು ಎಂದು ವರದಿ ಹೇಳಿದೆ. ಮುಕೇಶ್ ಎಸೆತದಲ್ಲಿ ಬ್ಯಾಟ್ ಸವರಿ ಹೋದ ಚೆಂಡು ಸೆಕೆಂಡ್ ಸ್ಲಿಪ್ ಕೈ ಸೇರಿತ್ತು. ಇದಾದ ಬಳಿಕ ನೇರ ನೆಟ್ಸ್ ಗೆ ಹೋಗಿ ಅಭ್ಯಾಸ ನಡೆಸಿದ್ದರು.
ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೆ ಆಟಕ್ಕೆ ಮರಳಿದ ವಿರಾಟ್ ಈ ಬಾರಿ ಉತ್ತಮ ಲಯದಲ್ಲಿ ಆಡಿದ್ದಾರೆ. ಲೈನ್-ಲೆಂತ್ ಗುರುತಿಸುವಿಕೆ, ಹ್ಯಾಂಡ್-ಐ ಕಾರ್ಡಿನೇಶನ್ ನಲ್ಲಿ ವಿರಾಟ್ ನಲ್ಲಿ ಉತ್ತಮವಾಗಿ ಕಂಡರು. ಎಲ್ಲಾ ಬೌಲರ್ ಗಳನ್ನು ಉತ್ತಮವಾಗಿ ಎದುರಿಸಿದ ವಿರಾಟ್ ವಿಕೆಟ್ ಕಳೆದುಕೊಳ್ಳದೆ 30 ರನ್ ಮಾಡಿ ಬಳಿಕ ಮೈದಾನ ತೊರೆದರು.
ಬಳಿಕ ಜೈಸ್ವಾಲ್, ಗಿಲ್ ಮತ್ತು ರಿಷಭ್ ಪಂತ್ ಬ್ಯಾಟಿಂಗ್ ನಡೆಸಿದರು. ಆದರೆ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಶುಭಮನ್ ಗಿಲ್ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಗಿಲ್ ಅವರ ಹೆಬ್ಬೆರಳಿನ ಮೂಳೆ ಮುರಿತವಾಗಿದ್ದು, ಮೊದಲ ಟೆಸ್ಟ್ ಪಂದ್ಯದಿಂದ ಬಹುತೇಕ ಹೊರ ಬಿದ್ದಿದ್ದಾರೆ.