ಬೆಂಗಳೂರು: “ಪೇ ಸಿಎಂ 40 ಪರ್ಸೆಂಟ್’ ಪೋಸ್ಟರ್ ಅಭಿಯಾನ ಸಮರ್ಥಿಸಿಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಭಿಯಾನವನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.
ರಾಜ್ಯದಲ್ಲಿರುವ ಬಿಜೆಪಿ ಸರಕಾರ 40 ಪರ್ಸೆಂಟ್ ಸರಕಾರ ಎಂದು ನಾವು ಹೇಳುವುದಲ್ಲ. ಅದು ಗುತ್ತಿಗೆದಾರರು, ಶಿಕ್ಷಣ ಸಂಸ್ಥೆಗಳ ಸಂಘದವರು ಹಾಗೂ ಸಾರ್ವಜನಿಕರ ಮಾತಾಗಿದೆ. ಇದನ್ನು ನಾವು ಅಭಿಯಾನ ಮಾಡುತ್ತಿದ್ದೇವೆ. ನಾವೇ ಮುಂದೆ ನಿಂತು ಪೋಸ್ಟರ್ ಅಂಟಿಸುತ್ತೇವೆ. ನಮ್ಮನ್ನೂ ಬಂಧಿಸಿ ಎಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಈ ಕುರಿತು ಟ್ವೀಟ್ ಮಾಡಿ, ರಾಜ್ಯ ಸರಕಾರದ ಲಂಚಗುಳಿತನದ ಬಗ್ಗೆ ಪಕ್ಷದ ಕಾರ್ಯಕರ್ತರ ಜತೆ ನಾನೇ ಪೋಸ್ಟರ್ ಅಂಟಿಸುತ್ತೇನೆ. ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ. ನನ್ನ ಮತ್ತು ಡಿ.ಕೆ.ಶಿವಕುಮಾರ್ ಪೋಸ್ಟರ್ ಅಂಟಿಸಿದ್ದರಲ್ಲ ಅದರ ಬಗ್ಗೆ ಮುಖ್ಯಮಂತ್ರಿಯವರು ಯಾಕೆ ಮೌನವಾಗಿದ್ದಾರೆ? ಪೊಲೀಸರ ಕಣ್ಣು ಯಾಕೆ ಕುರುಡಾಗಿದೆ ಎಂದು ಪ್ರಶ್ನಿಸಿದ್ದಾರೆ.
ಏನು ಮುಖ್ಯಮಂತ್ರಿಯವರೇ, ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ಯಾರೋ ನಿಮಗೆ ಚುಚ್ಚಿದ್ದಕ್ಕೆ ನೋವಾಯಿತಾ? ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪ – ಪ್ರತ್ಯಾರೋಪ ಸಹಜ ವಿದ್ಯಮಾನವಾದರೂ ಇದನ್ನು ಇಷ್ಟೊಂದು ಕೀಳು ಮಟ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ಕರ್ನಾಟಕದ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿಯೇ ನನ್ನ ವಿರುದ್ಧದ ಕುತ್ಸಿತ ಹೇಳಿಕೆಗಳು, ವಿರೂಪಗೊಳಿಸಿದ ಪೋಟೋಗಳ ವಿವರ ಕೊಡುತ್ತೇನೆ. ಅವರನ್ನೂ ಬಂಧಿಸಿ, ನಾನು ಅಧಿಕಾರದಲ್ಲಿದ್ದಾಗಲೇ ಇಂಥವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿಲ್ಲ, ಇದು ನಾನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಟ್ಟ ಗೌರವ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳು ಪೋಸ್ಟರ್ ವಿಚಾರಕ್ಕೆ ಇಷ್ಟು ತಲೆಕೆಡಿಸಿಕೊಂಡು ಗಾಬರಿಯಾಗಿರುವುದು ಯಾಕೆ? ಈ ಪೋಸ್ಟರ್ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದು ಯಾಕೆ ಎಂದು ಪ್ರಶ್ನಿಸಿದರು.
ನಾಳೆ ನಮ್ಮ ಎಲ್ಲ ಶಾಸಕರು ಸೇರಿ “ಪೇ ಸಿಎಂ’ ಪೋಸ್ಟರ್ ಅನ್ನು ಸರಕಾರಿ ಕಚೇರಿಗಳಲ್ಲಿ ಅಂಟಿಸುತ್ತೇವೆ. ಎಲ್ಲಿ ಅಂಟಿಸುತ್ತೇವೆ ಎಂದು ಮುಂದೆ ತಿಳಿಸುತ್ತೇವೆ. ಬಿಜೆಪಿಯವರು ನಮ್ಮ ಬಗ್ಗೆಯೂ ಕ್ಯುಆರ್ ಕೋಡ್ ಹಾಕಿದ್ದಾರೆ. ವಿಚಾರಣೆಗೆ ಹೋದ ಸಮಯದಲ್ಲಿ ನಾನು ಕಂಬಿ ಹಿಂದೆ ಇರುವಂತೆ ಮಾಧ್ಯಮಗಳು ಫೋಟೋ ಹಾಕಿದ್ದರು. ಹಾಗೆಂದು ನಾನು ಅವರ ವಿರುದ್ಧ ದೂರು ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.